
ಬೀದರ್: ಆಧ್ಯಾತ್ಮಿಗಳು, ಬಸವ ಅಳವಡಿಸಿಕೊಂಡವರು ರಾಜಕೀಯದ ಕೊಳಕು ತೆಗೆಯಲು ಮುಂದೆ ಬರಬೇಕು ಎಂದು ಬೆಂಗಳೂರಿನ ಜಾಗೃತಿ ಕರ್ನಾಟಕದ ಡಾ. ಎಚ್.ವಿ. ವಾಸು ಸಲಹೆ ಮಾಡಿದರು.
ನಗರದ ಬಸವಗಿರಿಯಲ್ಲಿ ನಡೆದ ಬಸವೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅನುಭಾವ ಮಂಡಿಸಿದರು.
ಒಳ್ಳೆಯ ಜನ ರಾಜಕಾರಣದಿಂದ ದೂರ ಇರಬಾರದು ಎಂದು ತಿಳಿಸಿದರು.
ರಾಜಕೀಯ ಹಾಗೂ ಸಂಸಾರದಲ್ಲಿ ಒಳ್ಳೆಯ ಆಯ್ಕೆಗೆ ಬಸವಣ್ಣನವರ ಕಳಬೇಡ ಕಳಬೇಡ ವಚನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಸಮಾಜ, ಸರ್ಕಾರ ಹಾಗೂ ಸಂಸಾರದಲ್ಲಿ ಬದಲಾವಣೆ ತರುವ ಶಕ್ತಿ ವಚನಗಳಿಗಿದೆ ಎಂದು ತಿಳಿಸಿದರು.
ಎಂಟು ನೂರು ವರ್ಷ ಭೂಗತವಾಗಿದ್ದ ವಚನಗಳನ್ನು ಬೆಳಕಿಗೆ ತಂದವರು ಫ.ಗು. ಹಳಕಟ್ಟಿ. ಬಸವ ತತ್ವ ಪ್ರಸಾರ ಮಾಡಿದವರಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ಹೆಸರು ಮೇಲ್ಪಂಕ್ತಿಯಲ್ಲಿದೆ. ಅಕ್ಕ ಅನ್ನಪೂರ್ಣ ತಾಯಿ ಅವರ ಕಾರ್ಯವನ್ನೇ ಮುಂದುವರಿಸಿರುವ ಪ್ರಭುದೇವ ಸ್ವಾಮೀಜಿ ಅವರ ಕಾರ್ಯ ರಾಜ್ಯಕ್ಕೆ ಮಾದರಿಯಾಗುತ್ತಿದೆ ಎಂದು ಹೇಳಿದರು





















