Home ಜಿಲ್ಲೆ ಕಲಬುರಗಿ ನರೇಗಾ ಯೋಜನೆ ಪುನ: ಆರಂಭಿಸಲು ಆಗ್ರಹ

ನರೇಗಾ ಯೋಜನೆ ಪುನ: ಆರಂಭಿಸಲು ಆಗ್ರಹ

ಕಲಬುರಗಿ,ಮೇ.20-ವಿಬಿ ಜಿ ರಾಮ್ ಜಿಯನ್ನು ಹಿಂತೆಗೆದುಕೊಂಡು ನರೇಗಾ ಯೋಜನೆಯನ್ನು ಪುನಃ ಆರಂಭಿಸಲು ಒತ್ತಾಯಿಸಿ ಎಐಕೆಕೆಎಮ್‍ಎಸ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು ಹೊಸದಾಗಿ ತರುತ್ತಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಕೈ ಬಿಟ್ಟು ನರೇಗಾ ಯೋಜನೆಯನ್ನು ಮುಂದುವರಿಸಲು ಒತ್ತಾಯಿಸಿ ಹಾಗೂ ಎರಡು ನೂರು ಮಾನವ ದಿನಗಳ ಕೆಲಸವನ್ನು ಖಾತ್ರಿಪಡಿಸಲು ಅಗ್ರಹಿಸಿ ಮತ್ತು ದಿನಕ್ಕೆ 600 ಕೂಲಿಗಾಗಿ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ವಿಬಿ ಜಿ ರಾಮ್ ಜಿ ಕಾಯ್ದೆ-2025 ಅನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು, ನರೇಗಾ ಕೆಲಸವನ್ನು 200 ಮಾನವದಿನಗಳಿಗೆ ಹೆಚ್ಚಿಸಿ, ದಿನಕ್ಕೆ 600 ರೂ.ಕೂಲಿಯನ್ನು ಖಾತ್ರಿಪಡಿಸಬೇಕು, ರಾಜ್ಯ ಸರ್ಕಾರ ತಕ್ಷಣವೇ ಗ್ರಾಮೀಣ ಬಡಜನತೆಗೆ ಉದ್ಯೋಗ ನೀಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು, ಕಣ್ಣಿನ ಸ್ಕ್ಯಾನಿಂಗ್ ಮಾದರಿಯನ್ನು ಕೈಬಿಟ್ಟು ಕಾರ್ಮಿಕರ ಗ್ರೂಪ್ ಫೋಟೊ ಮಾದರಿಯನ್ನು ಹಾಜರಾತಿಯ ದಾಖಲೆಯನ್ನಾಗಿ
ತೆಗೆದುಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಗಣಪತ ರಾವ್ ಕೆ. ಮಾನೆ, ಕಾರ್ಯದರ್ಶಿಗಳಾದ ಮಹೇಶ್ ಎಸ್. ಬಿ. ಜಿಲ್ಲಾ ನಾಯಕರುಗಳಾದ ವಿಶ್ವನಾಥ್ ಸಿಂಗೆ, ನೀಲಕಂಠ ಹುಲಿ, ಭೀಮು ಆಂದೋಲ, ಸಾಬಣ್ಣ ಸುಣಗಾರ, ಚೌಡಪ್ಪ ಗಂಜಿ, ಶರಣಪ್ಪ ಕಾಂಬಳೆ, ಸುರೇಶ ಭೀಮಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.