Home ಜಿಲ್ಲೆ ಗಡಿ ಕನ್ನಡ ಶಾಲೆ ತನಿಖೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಮನವಿ

ಗಡಿ ಕನ್ನಡ ಶಾಲೆ ತನಿಖೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಮನವಿ

ಬೀದರ: ಮೇ.20:ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲೂಕಿನ ಕಾರಾಮುಂಗಿ ಸೇರಿದಂತೆ ಹೊರನಾಡಿನ 10 ಕನ್ನಡ ಶಾಲೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಕರ್ನಾಟಕ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಹೊರನಾಡು ಕನ್ನಡಿಗರ ಹೊರಾಟ ಸಮಿತಿ ಸದಸ್ಯ ಕಾಶಿನಾಥ ಗಡ್ಡೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.
ಅವರು ಇಂದು ಉಪಜಿಲ್ಲಾಧಿಕಾರಿಗಳಾದ ಶಿವಾನಂದ ಕರಾಳೆಯವರನ್ನು ಭೇಟಿಯಾಗಿ ವಿಷಯ ಪ್ರಸ್ತಾಪಿಸಿದರು ಅದಕ್ಕೆ ಅವರು ಸ್ಪಂದಿಸಿ ಶೀಘ್ರವೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾರಾಮುಂಗಿ ಗ್ರಾಮಕ್ಕೆ ಕಳಿಸಿ ಪರಿಶೀಲನೆ ವರದಿಯನ್ನು ಶೀಘ್ರವೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಕರ್ನಾಟಕ ಸರ್ಕಾರದ ಉಲ್ಲೇಖಿತ ಪತ್ರದ ಅನ್ವಯ ಸಲ್ಲಿಸಿರುವ ಮನವಿಯಲ್ಲಿ, ಕಾರಾಮುಂಗಿ ಗ್ರಾಮದಲ್ಲಿ 1954-55ರಿಂದ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಸರ್ಕಾರಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳ ಅಭಿವೃದ್ಧಿಗೆ ಹೀರೆಮಠ ಸಂಸ್ಥಾನದ ಡಾ. ಚನ್ನಬಸವ ಪಟ್ಟದೇವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ವಿವರಿಸಲಾಗಿದೆ.

1990-91ರಲ್ಲಿ 10ನೇ ತರಗತಿಗೆ ಕನ್ನಡ ಮಾಧ್ಯಮ ಅನುಮತಿ ದೊರೆತಿದ್ದು, ನಂತರ ಶಿಕ್ಷಕರ ನೇಮಕ, ಶಾಲಾ ಕೊಠಡಿಗಳು ಹಾಗೂ ಕನ್ನಡ ಪಠ್ಯಪುಸ್ತಕಗಳನ್ನು ಒದಗಿಸಲಾಗಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಕಾರಾಮುಂಗಿ ಸುತ್ತಮುತ್ತಲಿನ ಒಂಬತ್ತು ಗ್ರಾಮಗಳಲ್ಲಿಯೂ ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು: ಹೊರನಾಡು ಕನ್ನಡ ಶಾಲೆಗಳ ಅಭಿವೃದ್ಧಿಗೆ ಪ್ರತ್ಯೇಕ ನಿಧಿ ಹಾಗೂ ಪ್ರತ್ಯೇಕ ಪ್ರಾಧಿಕಾರ ರಚನೆ, ಕಾರಾಮುಂಗಿ ಶಾಲೆಗೆ ವಸತಿ ಹಾಗೂ ಆಡಳಿತ ಸೌಲಭ್ಯ ಕಲ್ಪಿಸುವುದು, ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿ ಮಿನಿ ರಂಗಮಂದಿರ ನಿರ್ಮಾಣ, ತೆಲಂಗಾಣದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ 25% ಮೀಸಲು ಹಾಗೂ 371(ಜೆ) ಪ್ರಮಾಣಪತ್ರ ಸೌಲಭ್ಯ, ಗ್ರಂಥಾಲಯ ಕಟ್ಟಡ ನಿರ್ಮಾಣ ಹಾಗೂ ಕನ್ನಡ ಪುಸ್ತಕಗಳ ಪೂರೈಕೆ, 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಗೌರವಧನ, ಪ್ರಯೋಗಾಲಯ ಸಾಮಗ್ರಿಗಳ ಪೂರೈಕೆ, ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ,ಐಟಿಐ, ಕಂಪ್ಯೂಟರ್ ತರಬೇತಿ, ತಾಂತ್ರಿಕ ಶಿಕ್ಷಣ ಹಾಗೂ ಪಿಯುಸಿ ತರಗತಿಗಳ ಆರಂಭ. ಇದೇ ವೇಳೆ, ಸಂಗಾರೆಡ್ಡಿ, ಮಹೆಬೂಬನಗರ ಹಾಗೂ ಹೈದರಾಬಾದ್ ಭಾಗಗಳ ಕನ್ನಡ ಶಾಲೆಗಳಿಗೆ ನೆರವು ಒದಗಿಸುವ ಕುರಿತು ಮೇ 29ರಂದು ನಡೆಯಲಿರುವ ಹೊರನಾಡು ಕನ್ನಡಿಗರ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹೊರನಾಡು ಕನ್ನಡ ಶಾಲೆಗಳ ಉಳಿವು ಹಾಗೂ ಕನ್ನಡ ಭಾಷೆಯ ಸಂರಕ್ಷಣೆಗೆ ಕರ್ನಾಟಕ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಕಾಶಿನಾಥ ಗಡ್ಡೆ ಆಗ್ರಹಿಸಿದ್ದಾರೆ.