
ಕಾಳಗಿ: ಮೇ.20:ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಡಾ.ಅವಿನಾಶ ಜಾಧವ ಅವರು ಮಂಗಳವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ತಾಲೂಕಿನಲ್ಲಿ ಮೂತ್ರಕೋಶ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಈ ಡಯಾಲಿಸಿಸ್ ಕೇಂದ್ರ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ತಿಳಿಸಿದರು. ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ದೂರದ ನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ತಪ್ಪಿಸಲು ಸರ್ಕಾರ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯವನ್ನು ಆರಂಭಿಸಿದೆ ಎಂದು ಹೇಳಿದರು.
ಕೇಂದ್ರಕ್ಕೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳು ಹಾಗೂ ಸಿಬ್ಬಂದಿಯನ್ನು ಒದಗಿಸಲಾಗಿದ್ದು, ಅಗತ್ಯವಿರುವ ರೋಗಿಗಳು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಮಾನವೀಯ ಸ್ಪಂದನೆಯೊಂದಿಗೆ ಚಿಕಿತ್ಸೆ ನೀಡಬೇಕು. ಆಸ್ಪತ್ರೆ ಆವರಣವನ್ನು ಸದಾ ಶುಚಿಯಾಗಿ ಇಟ್ಟುಕೊಳ್ಳುವ ಮೂಲಕ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ವಿಶ್ವನಾಥ ಕನಕ , ತಹಸೀಲ್ದಾರ ಪೃಥ್ವಿರಾಜ ಪಾಟೀಲ, ತಾ.ಪಂ ಇಓ ಬಸಲಿಂಗಪ್ಪ ಡಿಗ್ಗಿ, ಆಡಳಿತ ವೈದ್ಯಾಧಿಕಾರಿ ಅಮರೇಶ ಎಮ್. ಎಚ್ ಕಾಳಗಿ, ಪ್ರಶಾಂತ ಕದಂ, ರಮೇಶ ಕಿಟ್ಟದ, ಶೇಖರ ಪಾಟೀಲ, ಜಿತೇಂದ್ರ ರಾಠೋಡ, ಪುರುಷೋತ್ತಮ ಗುತ್ತೆದಾರ, ಶ್ರೀಕಾಂತ ತಾಂಡೂರ, ಶಿವಕುಮಾರ ಕಮಕನೂರ, ಭೀಮರಾಯ ಮಲಘಾಣ, ವೆಂಕಟೇಶ ರಾಠೋಡ, ಇಂದ್ರಜೀತ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.





















