Home ಜಿಲ್ಲೆ ಕಲಬುರಗಿ ವೈದ್ಯಕೀಯ ಕ್ಷೇತ್ರದಲ್ಲಿ ಕುಟುಂಬ ವೈದ್ಯರ ಪಾತ್ರ ಪ್ರಮುಖ

ವೈದ್ಯಕೀಯ ಕ್ಷೇತ್ರದಲ್ಲಿ ಕುಟುಂಬ ವೈದ್ಯರ ಪಾತ್ರ ಪ್ರಮುಖ

ಕಲಬುರಗಿ : ಮೇ.19:ಕುಟುಂಬ ವೈದ್ಯರು ಇಡೀ ಕುಟುಂಬದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲ್ವಿಚಾರಣೆ ಮಾಡುವ ಪ್ರಾಥಮಿಕ ವೈದ್ಯರಾಗಿದ್ದಾರೆ. ನವಜಾತ ಶಿಶುವಿನಿಂದ ಹಿಡಿದು ವೃದ್ಧರವರೆಗೂ ಎಲ್ಲರ ಆರೋಗ್ಯದ ಇತಿಹಾಸವನ್ನು ತಿಳಿದುಕೊಂಡು, ಜೀವಮಾನವಿಡೀ ನಿರಂತರ ವೈದ್ಯಕೀಯ ಆರೈಕೆಯನ್ನು ಒದಗಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ ಎಂದು ಹಿರಿಯ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೆಬಳಿ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ಬಸವಗಂಗಾ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳಚಾರ ಜರುಗಿದ “ವಿಶ್ವ ಕುಟುಂಬ ವೈದ್ಯರ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ಯಾವುದೇ ಕಾಯಿಲೆ, ನೋವು ಅಥವಾ ಸಣ್ಣಪುಟ್ಟ ಸಮಸ್ಯೆಗಳು ಬಂದಾಗ ಮೊದಲು ಸಂಪರ್ಕಿಸುವುದು ಕುಟುಂಬ ವೈದ್ಯರನ್ನೇ. ಇವರು ನಿಮ್ಮ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಹೊಂದಿರುವುದರಿಂದ ಅವರಿಗೆ ಚಿಕಿತ್ಸೆ ಸರಳವಾಗುತ್ತದೆ.
ಸಮಗ್ರ ಆರೋಗ್ಯ ರಕ್ಷಣೆ ಮಾಡುತ್ತಾರೆ. ಮಧುಮೇಹ, ರಕ್ತದೊತ್ತಡದಂತಹ ದೀರ್ಘಕಾಲೀನ ಸಮಸ್ಯೆಗಳನ್ನು ನಿವಾರಣೆಗೆ ನಿರಂತರ ಚಿಕಿತ್ಸೆ ಮತ್ತು ಔಷಧಿಗಳನ್ನು ಹೊಂದಾಣಿಕೆ ಮಾಡುತ್ತಾರೆ. ಅಗತ್ಯವಿದ್ದಾಗ ಅಥವಾ ವಿಶೇಷ ಚಿಕಿತ್ಸೆ ಬೇಕಾದಾಗ, ರೋಗಿಯನ್ನು ಸೂಕ್ತ ತಜ್ಞ ವೈದ್ಯರಿಗೆ ಕಳುಹಿಸಿ, ಚಿಕಿತ್ಸೆಯನ್ನು ಸಮನ್ವಯಗೊಳಿಸುತ್ತಾರೆ. ಕೌಟುಂಬಿಕ ಸಮಸ್ಯೆಗಳು ಅಥವಾ ಒತ್ತಡದಿಂದ ಉಂಟಾಗುವ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ, ಅಗತ್ಯ ಸಲಹೆ ಹಾಗೂ ಆಪ್ತ ಸಮಾಲೋಚನೆ ಮಾಡುತ್ತಾರೆ.ಆದ್ದರಿಂದ ದೈನಂದಿನ ಆರೋಗ್ಯದ ನಿರ್ವಹಣೆಗೆ ವಿಶ್ವಾಸಾರ್ಹ ವೈದ್ಯರನ್ನು ಹೊಂದುವುದು ಅತ್ಯಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ದಿನೇಶ್ ಮಿಶ್ರಾ, ದತ್ತು, ನಾಗೇಶ್ ಪೂಜಾರಿ, ಸಂತೋಷ ಸೇರಿದಂತೆ ಇನ್ನಿತರರಿದ್ದರು.