
ಬೆಂಗಳೂರು,ಮೇ.೧೯-ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಜಂಟಿ ಕ್ರಿಯಾ ಸಮಿತಿಯು ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರವನ್ನು ಹೈಕೋರ್ಟ್ ನಿರ್ಬಂಧಿಸಿದೆ.ಇದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗಬೇಕಿದ್ದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸದ್ಯಕ್ಕೆ ಮುಂದೂಡಲ್ಪಟ್ಟಂತಾಗಿದೆ.
ಮುಷ್ಕರ ನಡೆಸದಂತೆ ಸೂಚನೆ ನೀಡಿರುವ ಹೈಕೋರ್ಟ್ ಸರ್ಕಾರದ ಜೊತೆಗೆ ಮಾತುಕತೆ ನಡೆಸುವಂತೆ ಸೂಚನೆ ನೀಡಿ ಮೇ ೨೧ ರಂದು ವಿಚಾರಣೆ ಮುಂದೂಡಿ ರಾಜ್ಯ ಸರ್ಕಾರ ಹಾಗೂ ನೌಕರರ ಸಂಘಟನೆಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಪ್ರಶ್ನಿಸಿ ನಿನ್ನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜ್ ಮತ್ತು ನ್ಯಾ.ಕೆ.ಮನ್ಮಥರಾವ್ ಅವರಿದ್ದ ಪೀಠ ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿದೆ.
ಸಾರಿಗೆ ಸಂಘಟನೆಗಳೊಂದಿಗೆ ಸರ್ಕಾರ ಚರ್ಚೆ ನಡೆಸಲಿ, ಮುಷ್ಕರ ಬೇಡ ಎಂದು ಕೋರ್ಟ್ ಹೇಳಿದೆ. ಸರ್ಕಾರ ಮತ್ತು ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು ಸಾರಿಗೆ ಸಚಿವರೊಂದಿಗೆ ಸಭೆ ನಡೆಸಲು ಸೂಚಿಸಿದೆ.
ವಿಚಾರಣೆ ವೇಳೆ ಸರ್ಕಾರ ಪರ ವಕೀಲರು ನೌಕರರ ಬೇಡಿಕೆ ಕುರಿತು ಸರ್ಕಾರ ಗಂಭೀರವಾಗಿ ಚರ್ಚಿಸಲು ಸಿದ್ಧವಿದ್ದು ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ಆಯೋಜಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಸಂಧಾನ ಪ್ರಕ್ರಿಯೆಗೆ ಅವಕಾಶ ನೀಡುವ ಉದ್ದೇಶದಿಂದ ತಕ್ಷಣ ಮುಷ್ಕರ ಕೈಗೊಳ್ಳಬಾರದು ಎಂದು ಜಂಟಿ ಕ್ರಿಯಾ ಸಮಿತಿಗೆ ಸೂಚನೆ ನೀಡಿತ್ತು.
ಇದೇ ವೇಳೆ ಸಾರಿಗೆ ಸೇವೆ ಸ್ಥಗಿತಗೊಂಡರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆಯನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡು ಮುಷ್ಕರ ನಡೆಸದಂತೆ ಸೂಚಿಸಿದೆ. ಸಭೆಯ ಪ್ರಗತಿ ಹಾಗೂ ಸರ್ಕಾರಗಳ ಕ್ರಮಗಳ ಕುರಿತು ಮುಂದಿನ ವಿಚಾರಣೆಯಲ್ಲಿ ಮಾಹಿತಿ ನೀಡುವಂತೆ ಸೂಚಿಸಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತು.
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಮನೆ ಕೆಲಸ ಮಾಡುತ್ತಿರುವ ನಗರದ ಸಿ.ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಹೆಚ್.ವಿ.ಶ್ರೀಧರ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಕೆಇಎಸ್ ಎಂಎ ಅಡಿ ಜ.೧ರಿಂದ ಜೂ.೩೦ರವರೆಗೆ ಮುಷ್ಕರ ನಿರ್ಬಂಧಿಸಲಾಗಿದೆ. ೨೦೨೫ರ ಜು.೧೮ರ ಕಾರ್ಮಿಕ ಆಯುಕ್ತರ ರಾಜಿ ಸಂಧಾನ ಪ್ರಕ್ರಿಯೆ ಮುಂದುವರಿದಿದೆ. ರಾಜಿ ಸಂಧಾನದ ಮುಂದಿನ ವಿಚಾರಣೆ ಮೇ ೨೫ಕ್ಕೆ ನಿಗದಿಯಾಗಿದೆ. ಈ ಮಧ್ಯೆ ಮುಷ್ಕರ ನಡೆಸುವುದು ಕಾನೂನುಬಾಹಿರ. ೧೪ ದಿನಗಳ ನೋಟಿಸ್ ಬದಲು ಮುಷ್ಕರಕ್ಕೆ ೭ ದಿನಗಳ ನೋಟಿಸ್ ನೀಡಲಾಗಿದೆ. ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗಳೂ ಇದೇ ಅವಧಿಯಲ್ಲಿ ನಿಗದಿಯಾಗಿರುವ ಕಾರಣ ಮೇ ೨೦ರಂದು ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರ ನಿರ್ಬಂಧಿಸಲು ಮನವಿ ಮಾಡಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ನೀಡಿದ್ದು, ಇದೇ ವೇಳೆ ಪಿಐಎಲ್ ಅರ್ಜಿದಾರರ ಬಗ್ಗೆ ಅಚ್ಚರಿ ಕೂಡ ವ್ಯಕ್ತಪಡಿಸಿದೆ.
ವಿಫಲವಾಗಿದ್ದ ಸಂಧಾನ ಸಭೆ:
ಸಾರಿಗೆ ನೌಕರರ ಮುಷ್ಕರ ವಿಚಾರ ಸಂಬಂಧ ಬನ್ನೇರುಘಟ್ಟದ ಕಾರ್ಮಿಕ ಭವನದಲ್ಲಿ ನಿನ್ನೆ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಸಾರಿಗೆ ನೌಕರರು ಪಟ್ಟು ಬಿಟ್ಟಿರಲಿಲ್ಲ. ಮತ್ತೆ ಮೇ ೨೫ಕ್ಕೆ ಸಭೆಗೆ ಬರಲು ಅಧಿಕಾರಿಗಳು ಆಹ್ವಾನ ನೀಡಿದರೂ ನಿಗಮದ ಅಧಿಕಾರಿಗಳ ಮನವಿಗೆ ಒಪ್ಪದ ಸಾರಿಗೆ ಮುಖಂಡರು, ಸಿಎಂ ಜೊತೆಗೆ ಸಭೆಗೆ ಪಟ್ಟು ಹಿಡಿದಿದ್ದರು. ಯಾವುದೇ ಮನವೊಲಿಕೆಗೂ ಬಗ್ಗದ ನೌಕರರು, ಇಂದು (ಮೇ ೧೯) ಮಧ್ಯಾಹ್ನದ ಒಳಗಾಗಿ ಸಭೆ ಕರೆದು ಬೇಡಿಕೆ ಈಡೇರಿಕೆ ಸಂಬಂಧ ಮಾತನಾಡುವಂತೆ ಆಗ್ರಹಿಸಿದ್ದರು. ಈ ವೇಳೆ ಸರ್ಕಾರ ಸದ್ಯದ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರೂ, ಸಿಎಂ ಜೊತೆ ಸಭೆಗೆ ಸಾರಿಗೆ ನೌಕರರ ಸಂಘಟನೆ ಆಗ್ರಹಿಸಿತ್ತು. ಅಲ್ಲದೆ ಸಭೆ ಮಾಡಿಲ್ಲ ಇದರಿಂದ ಮುಷ್ಕರ ನಡೆಸುವ ಪಟ್ಟು ಹಿಡಿಯಲಾಗಿತ್ತು.
























