Home ಜಿಲ್ಲೆ ಕನ್ನೋಳ್ಳಿ ಯಲ್ಲಿ ಅಕಾಲಿಕ ಮಳೆ ಆರ್ಭಟ : ದ್ರಾಕ್ಷಿ, ಪಪಾಯಿ ಬೆಳೆ ನಾಶ, ರೈತರಿಗೆ ಲಕ್ಷಾಂತರ...

ಕನ್ನೋಳ್ಳಿ ಯಲ್ಲಿ ಅಕಾಲಿಕ ಮಳೆ ಆರ್ಭಟ : ದ್ರಾಕ್ಷಿ, ಪಪಾಯಿ ಬೆಳೆ ನಾಶ, ರೈತರಿಗೆ ಲಕ್ಷಾಂತರ ನಷ್ಟ

ಜಮಖಂಡಿ ಮೇ.1:ಜಮಖಂಡಿ ತಾಲೂಕಿನ ಕನ್ನೋಳ್ಳಿ ಗ್ರಾಮದಲ್ಲಿ ಬುದುವಾರ ಸಾಯಂಕಾಲ ಸುಮಾರು 6 ಗಂಟೆ ಸುಮಾರಿಗೆ ಸುರಿದ ಅಕಾಲಿಕ ಮಳೆ ಹಾಗೂ ಗಾಳಿ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಿಂದಾಗಿ ಗ್ರಾಮದ ಹಲವಾರು ಹೊಲಗಳಲ್ಲಿ ದ್ರಾಕ್ಷಿ, ಪಪಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ಭಾರೀ ಹಾನಿಯಾಗಿದೆ.
ವಿಶೇಷವಾಗಿ ದ್ರಾಕ್ಷಿ ತೋಟಗಳಲ್ಲಿ ಹಣ್ಣುಗಳು ನೆಲಕ್ಕುರುಳಿ ಹಾಳಾಗಿದ್ದು, ಪಪಾಯಿ ಬೆಳೆಗೂ ಗಂಭೀರ ಹಾನಿಯಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ರೈತ ಮುಖಂಡ ಸುಭಾಷ್ ಸಿಂಧೆ ಮಾತನಾಡಿ, “ಸೂರ್ಯನ ತಾಪದ ನಂತರ ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ ಸೇರಿದಂತೆ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಕೇವಲ ಕೆಲವು ಎಕರೆ ಮಾತ್ರವಲ್ಲ, ಸುಮಾರು 200 ಎಕರೆಗಳಷ್ಟು ದ್ರಾಕ್ಷಿ ತೋಟಗಳು ನಾಶವಾಗಿವೆ. ಟೊಮೇಟೊ, ದ್ರಾಕ್ಷಿ ಸೇರಿದಂತೆ ಯಾವುದೇ ಬೆಳೆ ಉಳಿದಿಲ್ಲ. ಲಕ್ಷಾಂತರ, ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ,” ಎಂದು ತಿಳಿಸಿದ್ದಾರೆ.
“ರೈತರು ದ್ರಾಕ್ಷಿ ಬೆಳೆಸಲು ಎರಡು-ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ತೋಟಗಳನ್ನು ಬೆಳೆಸಿದ್ದರು. ಆದರೆ ಅಕಾಲಿಕ ಮಳೆಯೊಂದು ಎಲ್ಲಾ ಪರಿಶ್ರಮವನ್ನು ನಾಶಮಾಡಿದೆ. ಮನೆಗಳ ಶೆಡ್ಗಳು ಹಾನಿಗೊಳಗಾಗಿದ್ದು, ಪತ್ರಾಸುಗಳು ಹಾರಿ ಹೋಗಿವೆ,” ಎಂದು ಹೇಳಿದರು.
“ಇನ್ನೂ 24 ಗಂಟೆಗಳು ಕಳೆದರೂ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿಲ್ಲ. ತೋಟಗಾರಿಕೆ ಇಲಾಖೆಯವರು ಕೂಡ ಗಮನ ಹರಿಸುತ್ತಿಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸವೂ ಆಗುತ್ತಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಂತಹ ಅಕಸ್ಮಾತ್ ಮಳೆಯಿಂದ ರೈತರು ಸಾಲದ ಬಾಧೆಗೆ ಒಳಗಾಗುತ್ತಿದ್ದಾರೆ. ಕೆಲವರು ಆತ್ಮಹತ್ಯೆಯ ದಾರಿಯತ್ತ ತಳ್ಳಲ್ಪಡುತ್ತಿದ್ದಾರೆ. ತಕ್ಷಣ ಸರ್ಕಾರ ಪರಿಹಾರ ಘೋಷಿಸಿ ರೈತರ ನೆರವಿಗೆ ಬರಬೇಕು,” ಎಂದು ಮನವಿ ಮಾಡಿದರು.
ಈ ಕುರಿತು ರೈತ ಶ್ರೀ ರಾಜು ಗಣಪತಿ ಮೋಹಿತೆ ಹಾಗೂ ಗ್ರಾಮಸ್ಥರು ಮಾಹಿತಿ ನೀಡಿದ್ದು, ಸರ್ಕಾರ ತಕ್ಷಣ ಬೆಳೆ ಹಾನಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.