
ಬಿಜೆಪಿ ಪೋಸ್ಟರ್ ಬಿಡುಗಡೆ
ಬೆಂಗಳೂರು, ಫೆ. ೧೪- ರಾಜ್ಯದ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಮಾವೇಶಕ್ಕೆ ಕಿಡಿಕಾರಿರುವ ರಾಜ್ಯ ಬಿಜೆಪಿ, ಸಾವಿರ ದಿನ, ಸಾವಿರ ಸಮಸ್ಯೆ ಎಂದು ಸರ್ಕಾರವನ್ನು ಅಣಕಿಸುವ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದೆ.
ಬಿಜೆಪಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸಾಧನೆಗಳಿಲ್ಲದೆ ಈ ಸರ್ಕಾರ ಸಮಾವೇಶ ಮಾಡುತ್ತಿದೆ. ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಕಾಯಕವೇ ಕೈಲಾಸ ಎಂಬ ನೀತಿಯನ್ನು ಅಳವಡಿಸಿಕೊಂಡು ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ್ದರೆ, ರಾಜ್ಯ ಸರ್ಕಾರ ಕಾಯುವುದೇ ಕೆಲಸ ಎಂಬಂತೆ ನಡೆದುಕೊಳ್ಳುತ್ತಿದೆ. ಪಂಚ ಗ್ಯಾರಂಟಿಗಳು, ಪಂಕ್ಚರ್ ಆಗಿ ಬಹುದಿನಗಳೇ ಆಗಿವೆ. ಎರಡೂ ಮುಕ್ಕಾಲು ವರ್ಷದಲ್ಲಿ ರಸ್ತೆಗಳ ಗುಂಡಿ ಮುಚ್ಚಲು ಆಗಿಲ್ಲ. ಅಭಿವೃದ್ಧಿ ಮಾಡಲು ಕಾಂಗ್ರೆಸ್ ಸರ್ಕಾರದಿಂದ ಆಗಿಲ್ಲ. ಇವರ ಸಾಧನೆ ಭ್ರಷ್ಟಾಚಾರ ಅಷ್ಟೆ. ಭ್ರಷ್ಟಾಚಾರದಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಆರೋಪಿಸಿದರು.
ಸಾವಿರ ಸುಳ್ಳು ಹೇಳಿ ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಹೈಕಮಾಂಡ್ಗೆ ಸರ್ಕಾರ ಅಡವಿಟ್ಟಿದೆ. ಇಲ್ಲಿ ಲೂಟಿ ಮಾಡಿ ಹೈಕಮಾಂಡ್ನ್ನು ತೃಪ್ತಿಪಡಿಸುವ ಕೆಲಸ ನಡೆದಿದೆ. ಇದೊಂದು ನಾಲಾಯಕ್ ಅಭಿವೃದ್ಧಿ ಇಲ್ಲದ ಸರ್ಕಾರ ಎಂದು ಟೀಕಿಸಿದರು.
ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಮ್ಮ ಮೇಲೆ ಶೇ. ೪೦ ರಷ್ಟು ಕಮಿಷನ್ ಆರೋಪ ಮಾಡಿದರು. ಇವರು ಅಧಿಕಾರಕ್ಕೆ ಬಂದ ಮೇಲೆ ವಾಲ್ಮೀಕಿ ಹಗರಣ, ಮುಡಾ ಹಗರಣ, ಸ್ಮಾರ್ಟ್ ವಿದ್ಯುತ್ ಮೀಟರ್ ಹಗರಣ ಅಬಕಾರಿ ಹಗರಣ, ಗೃಹಲಕ್ಷ್ಮಿ ಹಗರಣಗಳು ನಡೆದಿ. ಎರಡು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿಗೆ ಹೋಗಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಇಲ್ಲದೆ ರಾಜ್ಯ ೨೫ ವರ್ಷ ಹಿಂದಕ್ಕೆ ಹೋಗಿದೆ. ಆರ್ಥಿಕ ಪರಿಸ್ಥಿತಿಯು ದಿವಾಳಿಯಾಗಿದೆ. ನುಡಿದಂತೆ ನಡೆದುಕೊಂಡ ಸರ್ಕಾರ ಎಂದು ಹೇಳುತ್ತಿದ್ದಾರೆ. ಸರ್ಕಾರಿ ಹುದ್ದೆಗಳನ್ನೇ ಭರ್ತಿ ಮಾಡಿಲ್ಲ ಎಂದು ದೂರಿದರು.
ಪ್ರಾದೇಶಿಕ ಅಸಮಾನತೆಗೆ ಸಂಬಂಧಿದಂತೆ ಪ್ರೊ. ಗೋವಿಂದರಾವ್ ವರದಿ ಸಲ್ಲಿಕೆಯಾಗಿದೆ. ಶೇ. ೬೫ ರಷ್ಟಿದ್ದ ಅಸಮಾನತೆ ಶೇ. ೭೫ ಕ್ಕೆ ಏರಿಕೆಯಾಗಿದೆ. ಇಷ್ಟಾದರೂ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಿಲ್ಲ. ಕಲಬುರುಗಿ ಜಿಲ್ಲೆ ಅತಿ ಹಿಂದುಳಿದ ಜಿಲ್ಲೆಯಾಗಿಯೇ ಉಳಿದಿದೆ. ಪ್ರಿಯಾಂಕ ಖರ್ಗೆ ಎಲ್ಲರ ಬಗ್ಗೆ ಮಾತನಾಡುತ್ತಾರೆ ಅವರ ಜಿಲ್ಲೆಯೇ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದರು.
ಅಭಿವೃದ್ಧಿಗೆ ಶಾಸಕರಿಗೆ ಅನುದಾನ ಕೊಟ್ಟಿಲ್ಲ. ವಿವಿಧ ಜಾತಿ ಸಮುದಾಯಗಳ ನಿಗಮಗಳಿಗೂ ಅನುದಾನ ಬಿಡುಗಡೆ ಮಾಡಿಲ್ಲ. ಇಷ್ಟಿರುವಾಗ ಇವರು ಯಾವ ರಾಮ ರಾಜ್ಯ ಮಾಡುತ್ತಾರಂತೆ ಎಂದು ವ್ಯಂಗ್ಯವಾಡಿದರು.
ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ಅನುದಾನ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ. ಅನುದಾನ ಬಳಕೆಗೆ ಪ್ರಮಾಣ ಪತ್ರ ನೀಡಬೇಕು. ಆದರೆ, ರಾಜ್ಯ ಸರ್ಕಾರ ಫೇಕ್ ಮತ್ತು ಫ್ಯಾಬ್ರಿಕೆಟೆಡ್ ಬಳಕೆ ಪತ್ರ ನೀಡಿದೆ ಎಂದು ವಿಜಯೇಂದ್ರ ಆರೋಪಿಸಿದರು.
ರೈಲ್ವೆ ಯೋಜನೆಗೆ ಹಣ ಕೊಟ್ಟಿಲ್ಲ
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ದೂರುತ್ತಿರುವ ರಾಜ್ಯ ಸರ್ಕಾರ ರೈಲ್ವೆ ಯೋಜನೆಗಳಿಗೆ ತನ್ನ ಪಾಲಿನ ಹಣ ಕೊಟ್ಟಿಲ್ಲ ಎಂಬ ದಾಖಲೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಮಹಾರಾಷ್ಟ್ರದ ನಾಂದೆಡ್ನಿಂದ ಬೀದರ್ಗೆ ಸಂಪರ್ಕ ಕಲ್ಪಿಸುವ ೧೫೬ ಕಿ.ಮೀ. ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮಹಾರಾಷ್ಟ್ರ ನತ್ನ ಪಾಲನ್ನು ಘೋಷಣೆ ಮಾಡಿದೆ ಆದರೆ ರಾಜ್ಯ ಸರ್ಕಾರ ಇದುವರೆಗೂ ಯೋಜನೆಗೆ ಹಣ ಕೊಟ್ಟಿಲ್ಲ. ಹಾಗಾಗಿ ಈ ಯೋಜನೆ ಜಾರಿಯಾಗಿಲ್ಲ. ರಾಜ್ಯಸಭಾ ಸದಸ್ಯ ಅಶೋಕ್ ಚೌಹ್ವಾಣ್ ತಮಗೆ ಬರೆದಿರುವ ಪತ್ರ ಬಿಡುಗಡೆ ಮಾಡಿದರು.
ರಾಜ್ಯ ಸರ್ಕಾರ ಕೇಂದ್ರವನ್ನು ದೂರುವ ಮೊದಲು ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬೇಡ ಎಂದರು.


























