
ವಾಷಿಂಗ್ಟನ್/ನವದೆಹಲಿ, ಏಪ್ರಿಲ್ ೧೪: ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಮಂಗಳವಾರ ಸುಮಾರು 40 ನಿಮಿಷಗಳ ದೂರವಾಣಿ ಸಂಭಾಷಣೆ ನಡೆದಿದೆ. ಈ ವೇಳೆ ಪಶ್ಚಿಮ ಏಷ್ಯಾದ ಪರಿಸ್ಥಿತಿ ಹಾಗೂ ಹೋರ್ಮುಜ್ ಕಣಿವೆ ದಿಗ್ಬಂಧನ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ.
ಅಮೆರಿಕದ ರಾಯಭಾರಿ ಸರ್ಜಿಯೋ ಗರ್ ಮಾಹಿತಿ ನೀಡುವಂತೆ, ಈ ವರ್ಷದಲ್ಲಿ ಇಬ್ಬರು ನಾಯಕರ ನಡುವೆ ನಡೆದ ಮೂರನೇ ಮಾತುಕತೆ ಇದಾಗಿದೆ. ಹೋರ್ಮುಜ್ ಕಣಿವೆಯನ್ನು ತೆರೆವುದು ಮತ್ತು ಸುರಕ್ಷಿತವಾಗಿಡುವ ಅಗತ್ಯವನ್ನು ಇಬ್ಬರು ನಾಯಕರು ಒತ್ತಿಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಪರಿಶೀಲಿಸಿದ್ದೇವೆ. ಸಮಗ್ರ ಜಾಗತಿಕ ತಂತ್ರಜ್ಞಾನದ ಭಾಗೀದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಈ ದೂರವಾಣಿ ಸಂಭಾಷಣೆ ಅಮೆರಿಕಾ-ಇರಾನ್ ಯುದ್ಧ ವಿರಾಮ ನಂತರ ನಡೆದ ಮೊದಲ ಮಾತುಕತೆಯಾಗಿದೆ. ಇತ್ತೀಚೆಗೆ ಅಮೆರಿಕಾ-ಇರಾನ್ ಶಾಂತಿ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಿದ ಸಂದರ್ಭದಲ್ಲಿಯೇ ಈ ಚರ್ಚೆ ನಡೆದಿರುವುದು ಮಹತ್ವದ್ದಾಗಿದೆ.
ಇದಕ್ಕೂ ಜೊತೆಗೆ, ಶೀಘ್ರದಲ್ಲೇ ಭಾರತ ಮತ್ತು ಅಮೆರಿಕಾ ನಡುವಿನ ಇಂಧನ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳು ಕೈಗೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕದ ವಲಯಗಳು ತಿಳಿಸಿವೆ.
ಲೆಬನಾನ್-ಇಸ್ರೇಲ್ ಮಾತುಕತೆ
ಇನ್ನೊಂದೆಡೆ, ಲೆಬನಾನ್ ಮತ್ತು ಇಸ್ರೇಲ್ ನಡುವೆ ದಶಕಗಳ ನಂತರ ಮೊದಲ ಬಾರಿಗೆ ನೇರ ರಾಜತಾಂತ್ರಿಕ ಮಾತುಕತೆಗಳು ವಾಷಿಂಗ್ಟನ್‌ನಲ್ಲಿ ನಡೆಯಲಿವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇಸ್ರೇಲ್ ದಾಳಿಗಳಲ್ಲಿ ಲೆಬನಾನ್‌ನಲ್ಲಿ 2,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಮಾತುಕತೆಗಳು ಯುದ್ಧಕ್ಕೆ ಅಂತ್ಯ ತರಬಹುದೇ ಎಂಬ ಕುತೂಹಲ ಮೂಡಿದೆ.ಆದರೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ಈ ಮಾತುಕತೆಗೆ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಒಪ್ಪಂದಗಳನ್ನು ಪಾಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ.






















