Home ಮುಖಪುಟ ಸುದ್ದಿ ಅಂತ್ಯದತ್ತ ಯುದ್ಧ ಇರಾನ್ ಮೇಲೆ ಎಲ್ಲವೂ ಅವಲಂಬನೆ

ಅಂತ್ಯದತ್ತ ಯುದ್ಧ ಇರಾನ್ ಮೇಲೆ ಎಲ್ಲವೂ ಅವಲಂಬನೆ

ವಾಷಿಂಗ್ಟನ್,ಏ.೧೫- ಅಮೆರಿಕ-ಇರಾನ್ ನಡುವಿನ ಯುದ್ಧ ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆದರೆ ಯುದ್ಧ ಇನ್ನೂ ಮುಗಿದಿಲ್ಲ’ ಎಲ್ಲವೂ ಇರಾನ್ ಮೇಲೆ ಅವಲಂಬಿಸಿದೆ ಎಂದು ಎಚ್ಚರಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಸಮಾನಾಂತರ ರಾಜತಾಂತ್ರಿಕ ಪ್ರಯತ್ನಗಳ ಜೊತೆಗೆ ನಿರಂತರ ಉದ್ವಿಗ್ನತೆಯ ನಡುವೆ ಇರಾನ್‌ನೊಂದಿಗೆ ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕ ಮುಂದಾಗಿದೆ. ಆದರೆ ಅಮೆರಿಕ ಇನ್ನೂ ಸೇನಾ ಕಾರ್ಯಾಚರಣೆ ಮುಗಿಸಿಲ್ಲ ಎಂದಿದ್ದಾರೆ.

ಸುದ್ಧಿಗಾರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆಗಿನ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಮುಂದಿನವಾರ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇರಾನ್ ಜೊತೆಗೆ ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕ ಮುಂದಾಗಿದೆ. ಯುದ್ಧ ಮುಗಿಯುವ ಸಮಯ ಹತ್ತಿರಕ್ಕೆ ಬಂದಿದೆ. ಆದರೆ ಅದು ಇರಾನ್ ನಡೆಯ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್ ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಉಭಯ ದೇಶಗಳ ನಡುವೆ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇರಾನಿನ ಬಂದರುಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಅಮೆರಿಕ ಬೆದರಿಕೆ ಹಾಕಿತ್ತು, ಇದಕ್ಕೆ ಮಣಿದ ಇರಾನ್ ಎರಡನೇ ಸುತ್ತಿನ ಮಾತುಕತೆಗೆ ಮುಂದಾಗಿದೆ ಎಂದಿದ್ದಾರೆ.

ಜಗತ್ತಿನ ಪ್ರಮುಖ ಕಚ್ಚಾ ತೈಲ ಪೂರೈಕೆ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ನಡೆಯುತ್ತಿರುವ ಅಮೆರಿಕ ನೌಕಾ ದಿಗ್ಬಂಧನದ ಮಧ್ಯೆ ಈ ಹೇಳಿಕೆಗಳು ಬಂದಿವೆ. ಸಾವಿರಾರು ಅಮೆರಿಕನ್ ಸಿಬ್ಬಂದಿ ಮತ್ತು ಬಹು ಯುದ್ಧನೌಕೆಗಳಿಂದ ಜಾರಿಗೊಳಿಸಲಾದ ದಿಗ್ಬಂಧನ ಈಗಾಗಲೇ ಹಲವಾರು ಹಡಗುಗಳನ್ನು ಇರಾನಿನ ಜಲಪ್ರದೇಶದಿಂದ ಹಿಂತಿರುಗುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ಇರಾನ್‌ನೊಂದಿಗೆ ಯುದ್ದ ಮುಗಿಯುವ ಹಂತಕ್ಕೆ ಬಂದಿದೆ ಆದರೆ ಇನ್ನೂ ಮುಗಿದಿಲ್ಲ, ಈ ಬಗ್ಗೆ ಮಾತುಕತೆಗಳು ನಡೆಯಲಿವೆ. ಇದರಿಂದ ಇರಾನ್ ನಡೆಯ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದಿದ್ದಾರೆ.

ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಹಲವು ಮೂಲಸೌಕರ್ಯ ನಾಶ ಮಾಡಿದ್ದೇವೆ, ಇದನ್ನು ಪುನರ್ನಿರ್ಮಿಸಲು ಇರಾನ್‌ಗೆ ಇನ್ನೂ ೨೦ ವರ್ಷಗಳು ಬೇಕಾಗಬಹುದು ಎಂದು ತಿಳಿಸಿದ್ದಾರೆ.

ಇನ್ನೆರಡು ದಿನದಲ್ಲಿ ಇರಾನ್-ಅಮೆರಿಕ ಮಾತುಕತೆ
ಅಮೆರಿಕ-ಇರಾನ್ ನಡುವೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಮಾತುಕತೆ ವಿಫಲವಾದ ನಂತರ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಇನ್ನೆರಡು ದಿನದಲ್ಲಿ ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.

ಇರಾನ್‌ನ ಎಲ್ಲಾ ಬಂದರುಗಳಿಗೆ ಅಮೆರಿಕ ದಿಗ್ಬಂಧನ ಹಾಕುವುದಾಗಿ ಬೆದರಿಕೆ ಹಾಕಿದ ನಡುವೆ ಇರಾನ್ ಅಮೆರಿಕ ಜೊತೆ ಮಾತುಕತೆ ಮುಂದಾಗಿದ್ದು ಈ ವಾರದಲ್ಲಿ ಮತ್ತೆ ಮಾತುಕತೆ ಪುನರ್ ಆರಂಭವಾಗಬಹುದು ಎಂದು ಮಾಹಿತಿ ನೀಡಿದ್ದಾರೆ.

ಈ ಬಾರಿಯೂ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುವ ನಿರೀಕ್ಷೆ ಇದೆ, ಹೀಗಾಗಿ “ನೀವು ಇಸ್ಲಾಮಾಬಾದ್‌ನಲ್ಲಿಯೇ ಇರಬೇಕು, ಮುಂದಿನ ಎರಡು ದಿನಗಳಲ್ಲಿ ಏನಾದರೂ ಸಂಭವಿಸಬಹುದು, ಮತ್ತು ನಾವು ಅಲ್ಲಿಗೆ ಹೋಗಲು ಹೆಚ್ಚು ಒಲವು ತೋರುತ್ತಿದ್ದೇವೆ” ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕಾರ್ಯಾಚರಣೆಯ ಮೊದಲ ೨೪ ಗಂಟೆಗಳಲ್ಲಿ ಯಾವುದೇ ಹಡಗುಗಳು ಇರಾನ್ ಬಂದರು ಮತ್ತು ಕರಾವಳಿ ಪ್ರದೇಶಗಳ ಮೇಲೆ ಅಮೆರಿಕ ಜಾರಿಗೊಳಿಸಿದ ದಿಗ್ಬಂಧನದ ಮೂಲಕ ಹಾದು ಹೋಗಿಲ್ಲ ಎಂದು ಅಮೆರಿಕನ್ ಮಿಲಿಟರಿ ಹೇಳಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರಿಂದ ಈ ಹೇಳಿಕೆ ಬಂದಿದೆ.

ಮುಂದಿನ ವಾರ ಮುಕ್ತಾಯಗೊಳ್ಳಲಿರುವ ಎರಡು ವಾರಗಳ ಕದನ ವಿರಾಮದ ಸಾಧ್ಯತೆ ಬಿಕ್ಕಟ್ಟು ಅಂತ್ಯಗೊಳ್ಳಲಿದೆಯೇ ಅಥವಾ ಮತ್ತೆ ಮುಂದುವರಿಯಲಿದೆ ಎನ್ನುವ ಅನುಮಾನ ಕೂಡ ಹುಟ್ಟು ಹಾಕಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇರಾನ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ, ಈ ನಡುವೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗಳು ಪುನರಾರಂಭಗೊಳ್ಳುವ ಸಂಭವನೀಯ” ಹೆಚ್ಚಿದೆ ಎಂದಿದ್ದಾರೆ.

ಗಲ್ಫ್, ಪಾಕಿಸ್ತಾನ ಮತ್ತು ಇರಾನಿನ ಅಧಿಕಾರಿಗಳು ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ತಂಡಗಳು ಈ ವಾರದ ಕೊನೆಯಲ್ಲಿ ನಡೆಯುವ ನಿರೀಕ್ಷೆ ಇದೆ. ರಾಜತಾಂತ್ರಿಕತೆಯು ತೈಲ ಮಾರುಕಟ್ಟೆ ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಫೆಬ್ರವರಿ ೨೮ ರಂದು ಅಮೆರಿಕ ಮತ್ತು ಇಸ್ರೇಲ್ ವಾಯುದಾಳಿಗಳಿಂದ ದಾಳಿಗೊಳಗಾದ ನಂತರ, ತೈಲ ಮತ್ತು ಅನಿಲ ಸಾಗಣೆಗೆ ನಿರ್ಣಾಯಕ ಜಾಗತಿಕ ಜಲಮಾರ್ಗವಾದ ಹೊರ್ಮುಜ್ ಜಲಸಂಧಿ ಮುಚ್ಚಿದ ಹಿನ್ನೆಲೆಯಲ್ಲಿ ಈ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಮಾಡಿದೆ.

ಒಂದು ಡಜನ್‌ಗಿಂತಲೂ ಹೆಚ್ಚು ಅಮೆರಿಕ ಯುದ್ಧನೌಕೆಗಳು ಮತ್ತು ಸುಮಾರು ೧೦,೦೦೦ ಅಮೆರಿಕ ಮಿಲಿಟರಿ ಸಿಬ್ಬಂದಿ ಈಗ ಇರಾನ್ ಬಂದರು ಪ್ರವೇಶಿಸುವ ಅಥವಾ ಹೊರಹೋಗುವ ಯಾವುದೇ ದೇಶದ ಹಡಗುಗಳ ವಿರುದ್ಧ ದಿಗ್ಬಂಧನ ಜಾರಿಗೊಳಿಸುತ್ತಿದ್ದಾರೆ.

ದೇಶದ ಎರಡು ಪ್ರಮುಖ ಹಣದ ಮೂಲಗಳಾದ ತೈಲ ಆದಾಯ ಮತ್ತು ನಿರ್ಣಾಯಕ ಜಲಮಾರ್ಗದ ಮೂಲಕ ಸಾಗಲು ಇರಾನ್ ಹಡಗುಗಳಿಂದ ಬೇಡಿಕೆಯಿಡುವ ಗಮನಾರ್ಹ ಸುಂಕಗಳನ್ನು ಗುರಿಯಾಗಿಸಿಕೊಂಡು ಇರಾನ್ ಮೇಲೆ ಒತ್ತಡ ಹೇರುವ ಗುರಿ ಹೊಂದಿದೆ.