Home ಜಿಲ್ಲೆ ಬೆಂಗಳೂರು ರಾಜ್ಯಕ್ಕೆ ನೆರವು ಪ್ರಧಾನಿಗೆ ಸಿಎಂ ಮನವಿ

ರಾಜ್ಯಕ್ಕೆ ನೆರವು ಪ್ರಧಾನಿಗೆ ಸಿಎಂ ಮನವಿ

ಬೆಂಗಳೂರು, ಏ. ೧೫- ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬಾಕಿ, ಮೇಕೆದಾಟು, ಮಹದಾಯಿ ಯೋಜನೆಗೆ ಮಂಜೂರಾತಿ, ಜಲ್‌ಜೀವನ್ ಮಿಷನ್ ಯೋಜನೆಯ ಬಾಕಿ ಹಣ ಬಿಡುಗಡೆ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವ ಘೋಷಣೆ ಸೇರಿದಂತೆ ರಾಜ್ಯಕ್ಕೆ ಕೇಂದ್ರದಿಂದ ತುರ್ತಾಗಿ ಆಗಬೇಕಾಗಿರುವ ಹತ್ತು ಹಲವು ಯೋಜನೆಗಳ ಮಂಜೂರಾತಿ, ಆರ್ಥಿಕ ನೆರವಿನ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಆಗ್ರಹ ಪೂರ್ವಕ ಮನವಿ ಸಲ್ಲಿಸಿದ್ದಾರೆ.


ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಗುರು ಬೈರವೈಕ್ಯ ಮಂದಿರದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದಿಳಿದ ಸಂದರ್ಭದಲ್ಲಿ ಅವರನ್ನು ರಾಜ್ಯದ ಪರವಾಗಿ ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರದಿಂದ ರಾಜ್ಯಕ್ಕೆ ದೊರಕಬೇಕಾಗಿರುವ ನೆರವು, ಬಾಕಿ ಇರುವ ಯೋಜನೆಗಳ ಮನವಿಯನ್ನು ಪ್ರಧಾನಿ ಅವರಿಗೆ ಸಲ್ಲಿಸಿದರು.


ಕರ್ನಾಟಕ ದೇಶದ ಬೊಕ್ಕಸಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಹಾಗೆಯೇ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲೂ ಮೂಂಚೂಣಿಯಲ್ಲಿದೆ. ಕೇಂದ್ರದಲ್ಲಿ ರಾಜ್ಯದ ಹಲವು ಯೋಜನೆಗಳು ಬಹಳ ದಿನಗಳಿಂದ ಬಾಕಿ ಉಳಿದಿವೆ. ಈ ಯೋಜನೆಗಳಿಗೆ ಮಂಜೂರಾತಿ ನೀಡುವ ಮೂಲಕ ಕರ್ನಾಟಕದ ಅಭಿವೃದ್ಧಿಯ ಜತೆಗೆ ಸಮಾನತೆಯ ಆಶಯಗಳು ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.


ಕರ್ನಾಟಕ ಭಾರತದ ಅಭಿವೃದ್ಧಿಯಲ್ಲಿ ಸದಾ ಮುಂಚೂಣಿಯಲ್ಲಿದೆ, ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿಯೂ ದೊಡ್ಡ ನಾಡಾಗಿದೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ಒಂದು ಆಧಾರ ಸ್ತಂಭವಾಗಿದೆ. ಐಟಿ- ಬಿಟಿ, ಕೃಷಿ ಉತ್ಪಾದನೆ, ಸೇವಾವಲಯ ಹೀಗೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಪ್ರಗತಿ ಸಾಧಿಸಿದೆ. ಆ ಮೂಲಕ ಭಾರತದ ಪ್ರಗತಿಗೂ ಕಾರಣವಾಗಿದೆ. ಕರ್ನಾಟಕ ಸದಾ ಎಲ್ಲರನ್ನೊಳಗೊಂಡ ಪ್ರಗತಿಯ ಜತೆಗೆ ಒಕ್ಕೂಟ ವ್ಯವಸ್ಥೆಯ ಸಿದ್ಧಾಂತಕ್ಕೂ ಬದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಸುಮಾರು ೧೪ ಅಂಶಗಳನ್ನು ಉಲ್ಲೇಖಿಸಿದ್ದು, ಇದರಲ್ಲಿ ಕೋಲಾರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ನಿರ್ಮಾಣ ನೆನೆಗುದಿಗೆ ಬಿದ್ದಿರುವುದನ್ನು ಪ್ರಸ್ತಾಪಿಸಿ, ರೈಲ್ವೆ ಕೋಚ್ ಕಾರ್ಖಾನೆಗೆ ರಾಜ್ಯ ಸರ್ಕಾರ ೧೨೩ ಎಕರೆ ಭೂಮಿ ಒದಗಿಸಲು ಸಿದ್ಧವಿದೆ. ಕೇಂದ್ರ ಕೂಡಲೇ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.


ಬೆಂಗಳೂರು-ಮೈಸೂರು ನಡುವೆ ಹೈಸ್ಪೀಡ್ ರೈಲ್ವೆ ಕಾರಿಡಾರನ್ನು ಸ್ಥಾಪಿಸಬೇಕು. ಬೆಂಗಳೂರು ಸಬ್‌ಹರ್ಬನ್ ರೈಲಿಗೆ ಹಣ ಬಿಡುಗಡೆ ಮಾಡಬೇಕು. ಜಲ್‌ಜೀವನ್ ಮೀಷನ್ ಯೋಜನೆಯಡಿ ಬಾಕಿ ಇರುವ ಕೇಂದ್ರದ ೧೫,೫೫೪ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆಯೂ ಅವರು ಮನವಿ ಮಾಡಿದ್ದಾರೆ.


ಕೇಂದ್ರದ ೧೫ನೇ ಹಣಕಾಸು ಆಯೋಗ ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ನೀಡಿದ್ದ ೨೮೬೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಜತೆಗೆ ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಅನುದಾನವಾಗಿ ೬ ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆಯೂ ಪ್ರಧಾನಿಗಳಿಗೆ ಮುಖ್ಯಮಂತ್ರಿಗಳು ನೀಡಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ


ರಾಜ್ಯಕ್ಕೆ ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಮಂಜೂರು ಮಾಡವಂತೆ ಒತ್ತಾಯಿಸಿದ ಅವರು, ೧೫ನೇ ಹಣಕಾಸು ಆಯೋಗದ ವಿತ್ತೀಯ ಕೊರತೆಯ ಅನುನಾದದ ೫೪೯೦೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆಯೂ ಕೋರಿದ್ದಾರೆ.


ಮೇಕೆದಾಟು ಯೋಜನೆಗಳೂ ಅನುಮತಿ ನೀಡುವಂತೆ ಒತ್ತಾಯಿಸಿರುವ ಅವರು, ಅಪ್ಪರ್ ಭದ್ರಾ ಯೋಜನೆಗೆ ಈ ಹಿಂದೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ೫೩೦೦ ಕೋಟಿ ರೂ.ಗಳ ನೆರವನ್ನು ಬಿಡುಗಡೆ ಮಾಡುವಂತೆಯೂ ಕೋರಿದ್ದಾರೆ.


ಕೃಷ್ಣ ನ್ಯಾಯಮಂಡಳಿಯ ಆದೇಶದ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಜತೆಗೆ ಕೃಷ್ಣಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.


ಮಹಾದಾಯಿ ಯೋಜನೆಗೂ ಪರಿಸರ ಇಲಾಖೆಯ ಅನುಮತಿ ನೀಡುವಂತೆ ಮನವಿ ಮಾಡಿರುವ ಅವರು, ನದಿ ಜೋಡಣೆ ಯೋಜನೆಯಡಿ ರಾಜ್ಯಕ್ಕೆ ಬರಬೇಕಾದ ನೀರು ಹಂಚಿಕೆಯನ್ನು ಸಮರ್ಪಕವಾಗಿ ಮಾಡುವಂತೆಯೂ ಒತ್ತಾಯಿಸಿದ್ದಾರೆ.


ಸಂವಿಧಾನದ ೯ನೇ ಷಡ್ಯೂಲ್ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಶೇ. ೫೦ ರಷ್ಟು ಮೀಸಲಾತಿ ನೀಡುವ ರಾಜ್ಯದ ತೀರ್ಮಾನವನ್ನು ಜಾರಿಗೊಳಿಸುವಂತೆಯೂ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಇದಕ್ಕೂ ಮೊದಲು ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಸಿ ಬರಮಾಡಿಕೊಂಡರು.