
ಬೆಂಗಳೂರು,ಸೆ,೧೫-ಗಣೇಶ ಚತುರ್ಥಿ ಸಂಭ್ರಮದ ಬೆನ್ನಲ್ಲೇ ಮಂಡ್ಯದ ಮದ್ದೂರಿನ ಕೊಪ್ಪ ಬಳಿ ಸಂಭವಿಸಿ ಅಪಘಾತದಲ್ಲಿ ಮೂವರು,ಬೆಳಗಾವಿಯಲ್ಲಿ ಅಪಘಾತಕ್ಕೆ ಮೂವರು, ಚಿಕ್ಕಮಗಳೂರು ಬಳಿ ಇಬ್ಬರು,ಕಲಬುರಗಿ, ದೇವನಹಳ್ಳಿ ಬಳಿ ತಲಾ ಒಬ್ಬರು,ಬೆಂಕಿ ಅವಘಡಕ್ಕೆ ನಾಲ್ವರು ಸೇರಿ ೧೪ ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮದ್ದೂರಿನ ಕೊಪ್ಪ ಬಳಿ ಸಂಭವಿಸಿ ಅಪಘಾತದಲ್ಲಿ ದಂಪತಿ ಮಗಳು ಸೇರಿ ಮೂವರು,ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿ ಬಸ್ ಡಿಕ್ಕಿ ಹೊಡೆದು ಮೂವರು ಯುವಕರು, ಚಿಕ್ಕಮಗಳೂರು ಬಳಿ ಬೈಕ್ ಅಪಘಾತದಲ್ಲಿ ಇಬ್ಬರು,ಕಲಬುರಗಿ, ದೇವನಹಳ್ಳಿ ಬಳಿ ತಲಾ ಒಬ್ಬರು ಸಾವನ್ನಪ್ಪಿದರೆ,ಬೆಳಗಾವಿ ನಗರದ ಚವ್ಹಾಟಗಲ್ಲಿಯ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ನಾಲ್ವರು ಸಜೀವ ದಹನವಾಗಿದ್ದಾರೆ.
ದಂಪತಿ ಮಗಳು ಸಾವು:
ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದ ಸ್ಕೂಟರ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದು ದಂಪತಿ ಮಗಳು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಮದ್ದೂರು ತಾಲೂಕಿನ ಕೊಪ್ಪ ಬಳಿ ಇಂದು ಮುಂಜಾನೆ ನಡೆದಿದೆ.
ಕೊಪ್ಪ ಮೂಲದ ಬೆಂಗಳೂರು ವಾಸಿ ಮುತ್ತುರಾಜ್ (೩೫), ಅವರ ಪತ್ನಿ ಕಾವ್ಯ (೩೦) ಹಾಗೂ ಎಂಟು ವರ್ಷದ ಪುತ್ರಿ ಕೀರ್ತನಾ ಸ್ಥಳದಲ್ಲೇ ಪ್ರಾಣ ಕಳೆದುಕೊಂಡವರು. ದಂಪತಿಯ ಮತ್ತೊಂದು ಮಗುವಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೌರಿ – ಗಣೇಶ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಈ ದಂಪತಿ ಮಕ್ಕಳು ಸಮೇತ ಊರಿಗೆ ಆಗಮಿಸಿದ್ದರು.ನಿನ್ನೆ ಹಬ್ಬದ ಎಲ್ಲ ಸಂಭ್ರಮಗಳನ್ನು ಮುಗಿಸಿಕೊಂಡು ಮುಂಜಾನೆ ೪ ರ ವೇಳೆ ಒಂದೇ ಸ್ಕೂಟರ್ ನಲ್ಲಿ ಬೆಂಗಳೂರಿಗೆ ವಾಪಸ್ ಪ್ರಯಾಣ ಬೆಳೆಸಿದ್ದರು.
ಮೂವರು ದುರ್ಮರಣ:
ಮಾರ್ಗ ಮಧ್ಯದ, ಕೊಪ್ಪ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ದಂಪತಿ ಹಾಗೂ ಹೆಣ್ಣು ಮಗು ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ಮಗು ತೀವ್ರವಾಗಿ ಗಾಯಗೊಂಡಿದೆ.
ಘಟನಾ ಸ್ಥಳಕ್ಕೆ ಕೊಪ್ಪ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಅತಿಯಾದ ವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ:
ದಂಪತಿ ಮತ್ತು ಮಕ್ಕಳು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.ಡಿಕ್ಕಿಯ ಭೀಕರತೆಗೆ ರಸ್ತೆಗೆ ಎಸೆಯಲ್ಪಟ್ಟ ಮುತ್ತುರಾಜ್, ಅವರ ಪತ್ನಿ ಹಾಗೂ ಹಿರಿಯ ಮಗಳು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ಯಾಂಕರ್ ಚಾಲಕನ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.
ಮೂವರು ಯುವಕರು ಸಾವು:
ಗಣೇಶ ಮೆರವಣಿಗೆ ನೋಡಿಕೊಂಡು ಒಂದೇ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಮೂವರು ಯುವಕರು ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ಸವದತ್ತಿ ಪಟ್ಟಣದ ವಿನೋದ್ ಹೊಗೆನ್ನವರ (೨೨), ಆಕಾಶ್ ಜಾಧವ್ (೨೦) ಹಾಗೂ ರವಿ ಕುರುಬರ (೨೨) ಮೃತಪಟ್ಟವರು. ಸವದತ್ತಿಯಿಂದ ಧಾರವಾಡದತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಬೈಕ್ ಗೆ ಮಾರ್ಗ ಮಧ್ಯದಲ್ಲಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಗಣೇಶ ಮೆರವಣಿಗೆ ವೀಕ್ಷಿಸಿ ಮನೆಗೆ ಹಿಂದಿರುಗುತ್ತಿದ್ದ ಮೂವರು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಸವದತ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇಬ್ಬರ ದಾರುಣ ಸಾವು:
ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ರಸ್ತೆಗೆ ಬಿದ್ದ ಸವಾರರ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಳೆಹಟ್ಟಿ ಗೇಟ್ ಸಮೀಪ ನಡೆದಿದೆ.
ಕಡೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಮತ್ತೊಂದು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದು, ಇದೇ ವೇಳೆ ಹಿಂಬದಿಯಿಂದ ಬಂದ ಸರ್ಕಾರಿ ಬಸ್ ಅವರ ಮೇಲೆ ಹರಿದಿದೆ.
ಮೃತರು ರಾಜಸ್ಥಾನ ಮೂಲದವರು ಎಂದು ತಿಳಿದುಬಂದಿದ್ದು, ಅವರ ಗುರುತು ಹಾಗೂ ಇತರ ವಿವರಗಳನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಸಖರಾಯಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಕಾರು ಡಿಕ್ಕಿ ವೃದ್ಧ ಸಾವು:
ವೇಗವಾಗಿ ಹೋಗುತ್ತಿದ್ದ ಹೋಂಡಾ ಸಿಟಿ ಕಾರು ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದು ವೃದ್ಧರೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬೆಂಗಳೂರು ಬಳಿಯ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.
ಶಿಡ್ಲಘಟ್ಟ ಮೂಲದ ವೆಂಕಟೇಶಪ್ಪ (೭೫) ಮೃತಪಟ್ಟಿದ್ದಾರೆ. ಮುನಿ ಅಕ್ಕಯ್ಯಮ್ಮ, ಮಾಲಾ ಹಾಗೂ ಪವನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಸುದ್ದಿ ತಿಳಿಯುತ್ತಿದ್ದಂತೆ ವಿಶ್ವನಾಥಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಯುವಕ ದುರ್ಮರಣ:
ಕಲಬುರಗಿ ನಗರದ ಹೀರಾಪುರ ರಸ್ತೆಯ ಫೈಓವರ್‌ನಲ್ಲಿ ಗಣೇಶ ಮೂರ್ತಿ ತರಲು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಕೊಟನೂರು ಬಡಾವಣೆಯ ಪ್ರಶಾಂತ್ ಬಿರಾದರ್ (೨೩) ಮೃತಪಟ್ಟಿದ್ದಾರೆ. ಬೈಕ್ ಟಚ್ ಆಗಿದ್ದರಿಂದ ರಸ್ತೆಗೆ ಬಿದ್ದು ಇಬ್ಬರ ತಲೆಗೆ ಗಂಭೀರ ಗಾಯಗಳಾಗಿತ್ತು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಶಾಂತ್ ಬಿರಾದರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳುವಿಗೆ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-೧ರಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ವರು ಸಜೀವ ದಹನ:
ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮದ ನಡುವೆಯೇ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರ ಸಜೀವ ದಹನವಾಗಿ, ಇಬ್ಬರು ಗಂಭೀರ ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ನಗರದ ಚವ್ಹಾಟಗಲ್ಲಿಯ ಮನೆಯಲ್ಲಿ ನಿನ್ನೆ ಮಧ್ಯರಾತ್ರಿ ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಮನೆಗೆ ಬೆಂಕಿ ಆವರಿಸಿದೆ.
ಮನೆಯಲ್ಲಿ ಮಲಗಿದ್ದ ಶಾರದಾ ದಮೋನೆ (೪೫), ಭಾರತಿ ರಾಜಾರಾಮ ದಮೋನೆ (೫೦), ಪ್ರಿಯಾ ಗಜಾನನ ದಮೋನೆ (೨೮) ಹಾಗೂ ಗಂಗಾ ಗಜಾನನ ದಮೋನೆ (೨೫)ಅವರು ಬೆಂಕಿಯಿಂದ ಹೊರಬರಲಾಗದೇ ಒಳಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಮತ್ತಿಬ್ಬರು ಗಂಭೀರ:
ಗಾಯಗೊಂಡಿರುವ ಗಜಾನನ ದಮೋನೆ (೬೫), ರೋಷನ್ ದಮೋನೆ (೨೧) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು,ಅವರ ಸ್ಥಿತಿ ಚಿಂತಾಜನಕವಾಗಿದೆ.
ಮೃತರ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಗಣೇಶ ಚತುರ್ಥಿಯ ದಿನವೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಮನೆಯೊಳಗಿನ ಅಡುಗೆಮನೆಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಶೆಡ್ ಮಾದರಿಯ ಮನೆಗೆ ವ್ಯಾಪಿಸಿದ್ದು, ಮನೆಯೊಳಗಿದ್ದ ಪ್ರತಿಯೊಂದು ವಸ್ತುವೂ ಸುಟ್ಟು ಕರಕಲಾಗಿದೆ.
ತಗಡಿನ ಶೆಡ್ ಮನೆ:
ಗಣೇಶ ಚತುರ್ಥಿಯ ನಿಮಿತ್ತ ಮನೆಯಲ್ಲಿ ಗಣಪತಿ ಮಂಟಪವನ್ನು ಸಹ ಸ್ಥಾಪಿಸಲಾಗಿತ್ತು. ಬೆಂಕಿ ಮಂಟಪಕ್ಕೂ ವ್ಯಾಪಿಸಿತ್ತು. ಫ್ರಿಡ್ಜ್ ಸ್ಪೋಟಗೊಂಡು ಬೆಂಕಿ ಮತ್ತಷ್ಟು ವ್ಯಾಪಿಸಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಫ್ರಿಡ್ಜ್ ಮುಂಭಾಗದಲ್ಲೇ ಮಲಗಿದ್ದ ನಾಲ್ವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಕಿಯ ತೀವ್ರತೆಗೆ ಫ್ರಿಡ್ಜ್ ಸಂಪೂರ್ಣ ಸುಟ್ಟು ಡಬ್ಬಿಯಂತೆ ಕಾಣುತ್ತಿದೆ. ತಗಡಿನ ಶೆಡ್‌ನಿಂದ ನಿರ್ಮಿಸಿದ್ದ ಮನೆಯಲ್ಲಿ ಆರು ಮಂದಿ ಕುಟುಂಬಸ್ಥರು ವಾಸಿಸುತ್ತಿದ್ದರು.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಮನೆ ಸುಟ್ಟು ಭಸ್ಮ:
ಘಟನೆ ನಡೆದ ಮನೆಯಲ್ಲಿ ಸಿಲಿಂಡರ್‌ಗಳನ್ನೂ ಕೂಡ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಆದರೂ, ಮನೆಯೊಳಗೆ ಟಿಜೋರಿ, ಫ್ರಿಡ್ಜ್ ಸೇರಿದಂತೆ ಎಲ್ಲ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
































