Home ಸುದ್ದಿ ರಾಷ್ಟ್ರೀಯ 10 ಕೋಟಿ ಬ್ಯಾರೆಲ್ ತೈಲ ಸಾಗಣೆ ಹಕ್ಕು ಕೊಂಡಾಡಿದ ಟ್ರಂಪ್

10 ಕೋಟಿ ಬ್ಯಾರೆಲ್ ತೈಲ ಸಾಗಣೆ ಹಕ್ಕು ಕೊಂಡಾಡಿದ ಟ್ರಂಪ್

ವಾಷಿಂಗ್ಟನ್‍ಜೂ11:ಯುನೈಟೆಡ್ ಸ್ಟೇಟ್ಸ್ ಮಿಲಿಟರಿಯು ಹಾರ್ಮುಜ್ ಜಲಸಂಧಿಯಲ್ಲಿ ಈ ಹಿಂದೆ ಬಹಿರಂಗಪಡಿಸದ ಅತ್ಯಂತ ರಹಸ್ಯ ಕಾರ್ಯಾಚರಣೆಯೊಂದನ್ನು ಯಶಸ್ವಿಯಾಗಿ ನಡೆಸಿದ್ದು, ಇದರ ಮೂಲಕ 100 ಮಿಲಿಯನ್ (10 ಕೋಟಿ) ಬ್ಯಾರೆಲ್‍ಗೂ ಹೆಚ್ಚು ಕಚ್ಚಾ ತೈಲವನ್ನು ಸುರಕ್ಷಿತವಾಗಿ ಸಾಗಿಸಲು ಸಹಾಯ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ಇದೇ ವೇಳೆ, ಪ್ರಸ್ತುತ ನಡೆಯುತ್ತಿರುವ ಶಾಂತಿ ಒಪ್ಪಂದದ ಮಾತುಕತೆಗಳು ವಿಫಲವಾದರೆ ಇರಾನ್ ಮೇಲೆ ತೀವ್ರ ಸರಣಿ ದಾಳಿ ನಡೆಸಲಾಗುವುದು ಎಂದು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, “ಕಳೆದ ತಿಂಗಳು, ಹೋರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್‍ಗಳು ಮತ್ತು ಇತರ ವಾಣಿಜ್ಯ ಹಡಗುಗಳಿಗೆ ರಕ್ಷಣೆ ನೀಡಲು ನಾನು ನಮ್ಮ ಶ್ರೇಷ್ಠ ಯುಎಸ್ ಮಿಲಿಟರಿಗೆ ರಹಸ್ಯ ಮಿಷನ್ ಕೈಗೊಳ್ಳಲು ಆದೇಶಿಸಿದೆ. ಇಂದು ಈ ಪ್ರಯತ್ನದ ಫಲವಾಗಿ 10 ಕೋಟಿಗೂ ಹೆಚ್ಚು ಬ್ಯಾರೆಲ್ ತೈಲವು ಜಲಸಂಧಿಯನ್ನು ದಾಟಿ ಮುಕ್ತ ಮಾರುಕಟ್ಟೆಯನ್ನು ತಲುಪಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. 200ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳು ಸುರಕ್ಷಿತವಾಗಿ ಸಂಚರಿಸಿವೆ” ಎಂದಿದ್ದಾರೆ.

ಮುಂದುವರಿದು, “ಈ ಭಾರಿ ಯಶಸ್ಸಿಗೆ ಕಾರಣ ಏನೆಂದರೆ, ಹಾರ್ಮುಜ್ ಜಲಸಂಧಿಯನ್ನು ಯುನೈಟೆಡ್ ಸ್ಟೇಟ್ಸ್ ನಿಯಂತ್ರಿಸುತ್ತಿದೆಯೇ ಹೊರತು ಇರಾನ್ ಅಲ್ಲ. ಅವರ ಮಿಲಿಟರಿ ಸೋತಿದೆ ಮತ್ತು ಅವರ ಆರ್ಥಿಕತೆ ಧ್ವಂಸಗೊಂಡಿದೆ. ಇರಾನ್ ಕಥೆ ಮುಗಿದಿದೆ!” ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳು ಸಫಲವಾಗದಿದ್ದರೆ ಅಮೆರಿಕ ಬಲವಾದ ಮಿಲಿಟರಿ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.”ನಾವು ಅವರ ಮೇಲೆ ಅತ್ಯಂತ ಕಠಿಣವಾಗಿ ದಾಳಿ ಮಾಡಲಿದ್ದೇವೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಅಮೆರಿಕದ ‘ಅಪಾಚೆ’ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದಕ್ಕೆ ವಾಷಿಂಗ್ಟನ್ ಈ ಪ್ರತಿಕ್ರಿಯೆ ನೀಡುತ್ತಿದ್ದು, ಮಿಲಿಟರಿ ಕಾರ್ಯಾಚರಣೆ ತಕ್ಷಣವೇ ಪ್ರಾರಂಭವಾಗಬಹುದು ಎಂದು ಅವರು ಸೂಚನೆ ನೀಡಿದ್ದಾರೆ. ಆದಾಗ್ಯೂ, ತಮಗೆ ಇನ್ನು ಕೂಡ ರಾಜತಾಂತ್ರಿಕ ಪರಿಹಾರದ ಮೇಲೆಯೇ ಆಸಕ್ತಿ ಇದೆ ಎಂದು ಟ್ರಂಪ್ ಹೇಳಿದ್ದಾರೆ.

ಜಾಗತಿಕ ತೈಲ ಬೆಲೆ ನಿಯಂತ್ರಣದ ದಾವೆ
ಫೆಬ್ರವರಿ 28 ರಂದು ಸಂಘರ್ಷ ಆರಂಭವಾಗುವ ಮೊದಲು, ವಿಶ್ವದ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಸುಮಾರು ಐದನೇ ಒಂದು ಭಾಗ ಈ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್ ಮತ್ತು ಕತಾರ್‍ನಂತಹ ದೇಶಗಳಿಗೆ ಇದು ಪ್ರಮುಖ ರಫ್ತು ಮಾರ್ಗವಾಗಿದೆ.

ಈ ರಹಸ್ಯ ಕಾರ್ಯಾಚರಣೆಯು ಜಾಗತಿಕ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. “ನಾನು ಇಂದು ಮೊದಲ ಬಾರಿಗೆ ಇದನ್ನು ಘೋಷಿಸುತ್ತಿದ್ದೇನೆ, ಆದರೆ ನಾವು ಪ್ರತಿ ರಾತ್ರಿ ಲಕ್ಷಾಂತರ ಬ್ಯಾರೆಲ್ ತೈಲವನ್ನು ಹೊರತೆಗೆಯುತ್ತಿದ್ದೇವೆ. ಈ ಕಾರ್ಯಾಚರಣೆಯಿಂದಾಗಿಯೇ ಇಂದು ತೈಲ ಬೆಲೆ ಬ್ಯಾರೆಲ್‍ಗೆ 250 ಡಾಲರ್ ತಲುಪುವ ಬದಲು 85 ರಿಂದ 90 ಡಾಲರ್ ಆಸುಪಾಸಿನಲ್ಲಿದೆ” ಎಂದು ಅವರು ವಿವರಿಸಿದ್ದಾರೆ.