
ಯಾದಗಿರಿ: ಮೀನು ಹಿಡಿಯಲು ತೆರಳಿದ್ದ ವೇಳೆ ರಭಸದ ಗಾಳಿಗೆ ಮೀನಿನ ಬಲೆ ಸಿಲುಕಿ ಮೃತಪಟ್ಟ ತಳಕ ಗ್ರಾಮದ ಮೀನುಗಾರ ಹಣಮಂತ ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ?೧೦ ಲಕ್ಷ ಪರಿಹಾರದ ಚೆಕ್‌ನ್ನು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮಂಗಳವಾರ ವಿತರಿಸಿದರು.
ಗ್ರಾಮದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೃತ ಹಣಮಂತ ಅವರ ತಂದೆ ಚಂದಪ್ಪ ಅವರಿಗೆ ಶಾಸಕ ತುನ್ನೂರು ಪರಿಹಾರದ ಚೆಕ್ ಹಸ್ತಾಂತರಿಸಿದರು.
‘ಸರ್ಕಾರ ನೀಡಿರುವ ಪರಿಹಾರದ ಹಣವನ್ನು ಕುಟುಂಬದ ಭವಿಷ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕು. ಹೊಲ ಖರೀದಿಸಿ ಕೃಷಿ ಮಾಡುವುದು, ಸಣ್ಣ ವ್ಯವಹಾರ ಆರಂಭಿಸುವುದು ಅಥವಾ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಮೂಲಕ ಹಣವನ್ನು ಸುರಕ್ಷಿತವಾಗಿ ಬಳಸಿಕೊಳ್ಳಿ. ಅನಗತ್ಯವಾಗಿ ಹಣವನ್ನು ಖರ್ಚು ಮಾಡಿ ಹಾಳು ಮಾಡಿಕೊಳ್ಳಬೇಡಿ’ ಎಂದು ಶಾಸಕರು ಸಲಹೆ ನೀಡಿದರು.
ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶರಣಬಸವ ಮಾತನಾಡಿ, ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಸಾಮಾಜಿಕ ಕಾರ್ಯಕರ್ತ ಉಮೇಶ ಮುದ್ನಾಳ ಅವರ ಪ್ರಯತ್ನ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರದಿಂದ ಪರಿಹಾರ ದೊರಕಿದೆ. ಕುಟುಂಬಕ್ಕೆ ಬಂದಿರುವ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮೀನುಗಾರಿಕೆಗೆ ತೆರಳುವಾಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಉಮೇಶ ಮುದ್ನಾಳ ಮಾತನಾಡಿ, ಬಡ ಕುಟುಂಬದ ಹಣಮಂತ ಅವರ ಅಕಾಲಿಕ ಸಾವು ಎಲ್ಲರಿಗೂ ನೋವು ತಂದಿದೆ. ಘಟನೆ ನಡೆದ ಕೂಡಲೇ ಶಾಸಕರು ಹಾಗೂ ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ವಿಷಯ ತಂದು ಪರಿಹಾರ ದೊರಕಿಸುವ ಪ್ರಯತ್ನ ಮಾಡಲಾಗಿತ್ತು. ಎಲ್ಲರ ಸಹಕಾರದಿಂದ ಕುಟುಂಬಕ್ಕೆ ಸರ್ಕಾರದ ಪರಿಹಾರ ಸಿಕ್ಕಿದೆ. ಕೇಂದ್ರ ಸರ್ಕಾರದಿಂದಲೂ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ತಾಲ್ಲೂಕು ಅಧಿಕಾರಿ ಶಂಕರ ಗೊಂಡಳ್ಳಿ, ಮೀನುಗಾರಿಕೆ ಸಹಾಯಕಿ ಭಾಗ್ಯ, ಶರಣಭೋಪಾಲರೆಡ್ಡಿ, ಬಸಣ್ಣ, ರಾಜಪ್ಪ, ದೊಡ್ಡಪ್ಪಗೌಡ, ಶಿವಪ್ಪ, ಬಸವರಾಜ, ಮಹೇಶ, ಗಂಗಣ್ಣ, ಬಸರೆಡ್ಡಿ, ಮರೇಪ್ಪ, ಪವನ, ಯಲ್ಲಪ್ಪ, ಯಂಕಪ್ಪ, ಸಾಬಣ್ಣ, ಚಂದಪ್ಪ, ಆನಂದ ಸೇರಿದಂತೆ ಸಾರ್ವಜನಿಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.





























