Home ಜಿಲ್ಲೆ ಮೃತ ಕಟ್ಟಡ ಕಾರ್ಮಿಕ ಆನಂದ್ ನಾಟೇಕಾರ್ ಕುಟುಂಬಕ್ಕೆ 1 ಲಕ್ಷ ನೆರವು

ಮೃತ ಕಟ್ಟಡ ಕಾರ್ಮಿಕ ಆನಂದ್ ನಾಟೇಕಾರ್ ಕುಟುಂಬಕ್ಕೆ 1 ಲಕ್ಷ ನೆರವು

ಯಾದಗಿರಿ: ಜು.12:ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಕಟ್ಟಡ ಕಾರ್ಮಿಕ ಆನಂದ್ ಭೀಮಣ್ಣ ನಾಟೇಕಾರ್ ಅವರ ಕುಟುಂಬಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ?1 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.

ನಗರದ ಸುಭಾಷ್ ವೃತ್ತದ ಸಮೀಪವಿರುವ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದೇವಜಿ ಜಾಧವ್ ಅವರು ಮೃತರ ಪತ್ನಿ ಪ್ರೀತಿ ನಾಟೇಕಾರ್ ಅವರಿಗೆ ಪರಿಹಾರದ ಚೆಕ್ ಹಸ್ತಾಂತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ದೇವಜಿ ಜಾಧವ್, ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರ ಕುಟುಂಬಗಳ ಬೆನ್ನಿಗೆ ನಿಲ್ಲುವುದು ಸಂಘದ ಪ್ರಮುಖ ಧ್ಯೇಯವಾಗಿದೆ. ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ದುಃಖದ ಸಂದರ್ಭಗಳಲ್ಲಿ ನೆರವು ನೀಡುವುದು ತನ್ನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಅದೇ ವೇಳೆ, ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರವೂ ಹೆಚ್ಚಿನ ಆದ್ಯತೆ ನೀಡಬೇಕು. ದುರ್ಘಟನೆ ಅಥವಾ ಅಕಾಲಿಕ ಮರಣ ಸಂಭವಿಸಿದ ಸಂದರ್ಭದಲ್ಲಿ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಹಾಗೂ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ವಿಳಂಬವಿಲ್ಲದೆ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಹುಲಗಪ್ಪ ಒಡೆಯರ್, ಪ್ರಧಾನ ಕಾರ್ಯದರ್ಶಿ ಬಾಬು, ಖಜಾಂಚಿ ಗೋಪಾಲ ಪವಾರ್, ಉಪಾಧ್ಯಕ್ಷ ರಾಜ್ ಮಹಮ್ಮದ್, ರೈಹೀಮಾನ್ ಸಾಬ್, ಉಮಾಕಾಂತ, ಗೋವಿಂದ ಗೋಪಾಲ, ಮರಿಲಿಂಗಪ್ಪ ಕೊಲ್ಲೂರಕರ್, ವೀರಣ್ಣ ಪರಸನಾಯಕ, ವಿಶ್ವನಾಥಪ್ಪ ಅಬ್ಬೇತುಮಕೂರ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.