Home ಜಿಲ್ಲೆ ಬೆಂಗಳೂರು ಕಾರ್ಮಿಕರು-ಮಾಲೀಕರ ಸಮನ್ವಯತೆಯಿಂದ ಪ್ರಗತಿ

ಕಾರ್ಮಿಕರು-ಮಾಲೀಕರ ಸಮನ್ವಯತೆಯಿಂದ ಪ್ರಗತಿ

ಕೆಂಗೇರಿ, ಜೂ೧೬: ಕಾರ್ಮಿಕರು ಹಾಗೂ ಮಾಲೀಕರ ನಡುವೆ ಸಮನ್ವಯತೆ ಇದ್ದಾಗ ಮಾತ್ರ ಪ್ರಗತಿ ಸಾಧ್ಯ ಎಂದು ಬಿಬಿಎಂಪಿ ಮಾಜಿ ಸದಸ್ಯ ಎ.ಎಂ. ಹನುಮಂತೇಗೌಡ ಹೇಳಿದರು.


ಯಶವಂತಪುರ ವಿಧಾನಸಭಾ ಕ್ಷೇತ್ರ ಕೆಂಗೇರಿ ಉಪನಗರದ ಶ್ರೀ ಎತ್ತೋ ಬಸವಣ್ಣ ಸ್ವಾಮಿ ದೇವಸ್ಥಾನದ ವೃತ್ತದಲ್ಲಿ ಸೊಲ್ಲಾಪುರದಮ್ಮ ಜೆಸಿಬಿ ಟಿಪ್ಪರ್ ಮತ್ತು ಟ್ಯಾಕ್ಟರ್ ಮಾಲೀಕರ ನೂತನ ಸಂಘದ ಉದ್ಘಾಟನೆ ಹಾಗೂ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿದ್ದು ಸಂಘದ ಸದಸ್ಯರೆಲ್ಲರೂ ಸೇರಿ ಒಮ್ಮತದಿಂದ ದರ ನಿಗದಿ ಮಾಡಿ ವ್ಯವಹಾರ ನಡೆಸಬೇಕೆಂದು ಮನವಿ ಮಾಡಿದರು. ಸಂಘದ ಗೌರವಾಧ್ಯಕ್ಷ ಮಾರಣ್ಣಕೆ ಮಾತನಾಡಿ ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ಕಾರ್ಯಗಳಿಗೆ ನಮ್ಮ ಸೇವೆ ಲಭ್ಯವಿದ್ದು ಸಾರ್ವಜನಿಕರು ಸಹಕಾರ ನೀಡುವ ಮೂಲಕ ಉತ್ತಮ ಸೇವೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.


ಅಧ್ಯಕ್ಷ ಶ್ರೀನಿವಾಸ ಮಾತನಾಡಿ ಕಾರ್ಮಿಕರು ಹಾಗೂ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಸಂಘ ಬದ್ಧವಾಗಿದೆ ಎಂದರು. ಸಂಘದ ಸದಸ್ಯರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಸಂಘದ ಬೆಳವಣಿಗೆ ಹಾಗೂ ಸಮಸ್ಯೆಗಳ ಪರಿಹಾರ ಸಾಧ್ಯ ಎಂದರು.


ಸಂಘದ ಉಪಾಧ್ಯಕ್ಷ ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಕೆ. ಪದ್ಮನಾಭ,ಖಜಾಂಚಿ ಇಸ್ಮಾಯಿಲ್, ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ್, ಸಹ ಕಾರ್ಯದರ್ಶಿ ಮಂಜುನಾಥ್,ಉಪ ಕಾರ್ಯದರ್ಶಿ ರಿಜ್ವಾನ್. ಎ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಮುಖಂಡರಾದ ಕೆಂಗೇರಿ ಪುರಸಭೆಯ ಮಾಜಿ ಉಪಾಧ್ಯಕ್ಷ ಜಿ. ಮುನಿರಾಜು, ಜಿಬಿಎ ನಾಗದೇವನಹಳ್ಳಿ ವಾರ್ಡ್ ಮುಖಂಡ ದೇವರಾಜು, ನಾಗದೇವನಹಳ್ಳಿ ಎನ್.ಸಿ. ಕುಮಾರ್,ಗಿರೀಶ್ ಮತ್ತಿತರರು ನೂತನ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.