Home ಜಿಲ್ಲೆ ಹಂಪಿ: ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಹಂಪಿ: ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಹೊಸಪೇಟೆ.ಆ.23 ವಿಶ್ವಪಾರಂಪರ ತಾಣ ಹಂಪಿಯಲ್ಲಿ ಸ್ಥಳೀಯ ಎಂಎಸ್ಪಿಎಲ್ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಹಂಪಿ ಗೆಜ್ಜಲ ಮಂಟಪ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಭಾರತೀಯ ಪುರಾತತ್ವ ಇಲಾಖೆ ಹಂಪಿ ವೃತ್ತದ ಪುರಾತತ್ವ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ, ಎಂಎಸ್ಪಿಎಲ್ ಸಂಸ್ಥೆ ಹಾಗೂ ಕೇಂದ್ರ ಪುರಾತತ್ವ ಇಲಾಖೆ ಸಹಯೋಗದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎಂಎಸ್ಪಿಎಲ್ ಸಂಸ್ಥೆ ರಕ್ಷಾ ಕವಚಗಳೊಂದಿಗೆ ಹಣ್ಣಿನ ಗಿಡಗಳನ್ನು ನೆಡುತ್ತಿರುವ ಕಾರ್ಯ ಶ್ಲಾಘನೀಯ. ಈ ಗಿಡಗಳು ಹಂಪಿ ಪರಿಸರಕ್ಕೆ ನೆರಳು ನೀಡುವ ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ಹಂಪಿಯಲ್ಲಿರುವ ಅಧಿಕ ಸಂಖ್ಯೆಯ ಕೋತಿಗಳು ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸಲಿವೆ. ಇದರಿಂದ ಹಂಪಿಯ ಸೌಂದರ್ಯ ಕೂಡ ಹೆಚ್ಚಳವಾಗಲಿದೆ ಎಂದರು.

ಎಂ.ಎಸ್.ಪಿ.ಎಲ್ ಸಂಸ್ಥೆಯ ಸಿಎಸ್ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಶ್ವಿನ್ ಕುಮಾರ್ ಮಾತನಾಡಿ, ಹಂಪಿಯಲ್ಲಿ ಎಂ.ಎಸ್.ಪಿ.ಎಲ್ ಸಂಸ್ಥೆಯಿಂದ ಒಟ್ಟು 100 ಗಿಡಗಳನ್ನು ನೆಡಲಾಗುತ್ತಿದ್ದು. ಇದರಲ್ಲಿ 50 ಪೇರಲ, 20 ನೇರಳೆ, 15 ಮಾವು ಹಾಗೂ 15 ಬೆಟ್ಟದ ನಲ್ಲಿಕಾಯಿ ಗಿಡಗಳು ಇವೆ. ಇವುಗಳನ್ನು ನೆಡುವ ಜೊತೆಗೆ ಅವುಗಳ ಸಂರಕ್ಷಣೆಗೆ ಎಂ.ಎಸ್.ಪಿ.ಎಲ್ ಸಂಸ್ಥೆ ಆಧ್ಯತೆ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಎಂ.ಎಸ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್. ವಿಭಾಗದ ಉಪ ವ್ಯವಸ್ಥಾಪಕ ಬಿ.ಎಂ.ನಾಗರಾಜ, ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಾದ ಅರುಣ್ ಪ್ರಸಾದ್, ಅಜಯ್, ಶಿವಕುಮಾರ್, ವಿರೂಪಾಕ್ಷಿ ಸೇರಿದಂತೆ ಇತರರು ಇದ್ದರು.