
ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.23 ತಾಲೂಕಿನ ಹಂಪಿಯ ತುಂಗಭದ್ರಾ ನದಿಯಲ್ಲಿ ತಾಯಿ, ಮಗಳು ನದಿಪಾಲಾದ ಘಟನೆಗೆ ಸಂಬಂಧಪಟ್ಟಂತೆ ನೀರು ಪಾಲಾಗಿದ್ದ ತಾಯಿಯ ಮೃತ ದೇಹ ಶನಿವಾರ ಪತ್ತೆಯಾಗಿದೆ.
ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯ ತುಂಗಭದ್ರಾ ನದಿಯ ಸ್ನಾನಘಟ್ಟದ ಹತ್ತಿರ ಶನಿವಾರ ಬೆಳಿಗ್ಗೆ 9-30 ರ ಸುಮಾರಿಗೆ ಜರುಗಿದ ಘಟನೆಯಲ್ಲಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಆಂಧ್ರಪ್ರದೇಶ ಕರ್ನೂಲು ಜಿಲ್ಲೆಯ, ಮಂತ್ರಾಲಯ ತಾಲೂಕಿನ ಸೂಳೆಕೆರೆ ಗ್ರಾಮದ ಶಾಹಿನ್(35) ಹಾಗೂ ಆಕೆಯ ಮಗಳು ಯಾಸ್ಮೀನ್(17) ಎಂಬ ಯುವತಿ ಕಾಲುಜಾರಿ ಬಿದ್ದು ನೀರು ಪಾಲಾಗಿದ್ದರು. ಮೊದಲು ಮಗಳು ಯಾಸ್ಮೀನ್ ಕಾಳುಜಾರಿ ನದಿಗೆ ಬಿದ್ದಿದ್ದು. ಮಗಳನ್ನು ಕಾಪಾಡಲು ಹೋದ ತಾಯಿ ಶಾಹೀನ್ ಕೂಡ ನದಿ ಪಾಲಾಗಿದ್ದರು.
ಸ್ಥಳೀಯ ಈಜುಗಾರರ ಸಹಾಯದಿಂದ ತಾಯಿ ಶಾಹೀನ್ ಅವರ ಮೃತದೇಹವನ್ನು ಹಂಪಿಯ ಜನತಾ ಪ್ಲಾಟ್ ಬಳಿ ಶನಿವಾರ ಪತ್ತೆಹಚ್ಚಲಾಗಿದೆ. ಮಗಳು ಯಾಸ್ಮೀನ್ ಮೃತ ದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಈಜು ಪಟುಗಳು ಹಾಗೂ ಎಸ್.ಡಿ.ಆರ್.ಎಫ್ ತಂಡ ಮೃತ ದೇಹದ ಹುಡುಕಾಟದಲ್ಲಿ ತೊಡಗಿದೆ.
ಈ ಕುರಿತು ಮೃತ ಮಹಿಳೆ ಶಾಹೀನ್ ಅವರ ಪತಿ ನೀಡಿದ ದೂರಿನ ಮೇರೆಗೆ ಹಂಪಿ ಪ್ರವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಭೇಟಿ: ಹಂಪಿ ತುಂಗಭದ್ರಾ ನದಿ ಸ್ನಾನಘಟ್ಟದಲ್ಲಿ ಶನಿವಾರ ತಾಯಿ, ಮಗಳು ನದಿ ಪಾಲಾದ ಘಟನೆ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹಾಗೂ ಹೊಸಪೇಟೆ ಡಿವೈಎಸ್ಪಿ ಪಿ.ಮುರಳೀಧರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.






























