
ಪುತ್ತೂರು: ಪರಿಸರ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರೂ ತಮ್ಮ ಜವಾಬ್ದಾರಿ, ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ. ನಮ್ಮ ಹಾಗೆಯೇ ಪೌರ ಕಾರ್ಮಿಕರು ಕೂಡ ಮನುಷ್ಯರು. ಅವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುವುದು, ಅವರ ಸೇವೆಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪುತ್ತೂರು ನಗರಸಭೆಯ ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಹೇಳಿದರು.
ಗಾಂಧಿ ಜಯಂತಿ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ನೇತೃತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಪೌರ ಕಾರ್ಮಿಕರಾದ ಸ್ವಚ್ಛತಾ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ರೋಟರಿ ಸೇವಾ ಸಂಸ್ಥೆಗಳೊಂದಿಗೆ ಐದು ಉದ್ಯಮ ಸಂಸ್ಥೆಗಳು ಪುತ್ತೂರಿನ ಅಭಿವೃದ್ಧಿಗೆ ಸೇವೆಯ ಮೂಲಕ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸ್ವಚ್ಛತೆ ಎಂಬುದು ಕೇವಲ ಸ್ವಚ್ಛತಾ ಸಿಬ್ಬಂದಿಯ ಜವಾಬ್ದಾರಿಯಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ. ಪುತ್ತೂರು ನಗರದ ಸೌಂದರ್ಯೀಕರಣದಲ್ಲಿ ಪೌರ ಕಾರ್ಮಿಕರ ಸೇವೆ ಬಹಳ ಅನನ್ಯವಾಗಿದೆ ಎಂದರು.
ಉಪ್ಪಿನಂಗಡಿ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಇಬ್ರಾಹಿಂ ಎಂ. ಮಾತನಾಡಿ, ಸತ್ಯ, ಅಹಿಂಸೆಯನ್ನು ಬೋಧಿಸಿದ ಮಾನವತಾವಾದಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರ ಹುಟ್ಟುಹಬ್ಬದಂದು ರೋಟರಿ ಸಂಸ್ಥೆ ಹಾಗೂ ಉದ್ಯಮಗಳು ಜೊತೆಗೂಡಿ ಪೌರ ಕಾರ್ಮಿಕರನ್ನು ಸನ್ಮಾನಿಸಿರುವುದು ಅವಿಸ್ಮರಣೀಯ ಎನಿಸಿದೆ ಎಂದರು.
ಗೌರವಾರ್ಪಣೆ
ಪುತ್ತೂರನ್ನು ನಿರಂತರವಾಗಿ ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಹೀರೋಗಳಾದ ನಗರಸಭೆ ಸ್ವಚ್ಛತಾ ಸೇನಾನಿಗಳಿಗೆ, ಚಾಲಕರಿಗೆ, ಸೂಪರ್ವೈಸರ್ಗಳಿಗೆ, ಸಮುದಾಯ ಪ್ರೇರಕರ ಸಹಿತ ಸುಮಾರು ೬೫ ಮಂದಿಗೆ ತಲಾ ರೂ.೨ ಸಾವಿರ ಮೌಲ್ಯದ ಕಿಟ್ ಸಮರ್ಪಣೆ ಮಾಡುವ ಮೂಲಕ ಗೌರವಿಸಲಾಯಿತು. ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ರವರನ್ನು ಸನ್ಮಾನಿಸಲಾಯಿತು.
ರೋಟರಿ ಸಂಸ್ಥೆಯ ವಿಶ್ವನಾಥ ಗೌಡ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಮನೋಜ್ ಟಿ.ವಿ, ಇಸ್ಮಾಯಿಲ್, ವಾಮನ ಪೈ, ಜಾಗೃತಿ ಜಾಥಾ ಉಸ್ತುವಾರಿ ಜಗಜೀವನ್ ದಾಸ್ ರೈ, ಪುತ್ತೂರು ನಗರಸಭೆಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್, ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಪುತ್ತೂರು ಎಂಟು ರೋಟರಿ ಕ್ಲಬ್ ಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾಯೋಜಕರಾದ ರೋ.ರಫೀಕ್ ಎಂ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್ ಸ್ವಾಗತಿಸಿದರು. ವಾಣಿ ಪ್ರಾರ್ಥಿಸಿದರು. ರೋ. ವಾಮನ ಪೈ ವಂದಿಸಿದರು. ಹೇಮಾ ಜಯರಾಂ ಕಾರ್ಯಕ್ರಮ ನಿರ್ವಹಿಸಿದರು. ಬೆಳಗ್ಗೆ ದರ್ಬೆ ಮತ್ತು ಬೊಳುವಾರಿನಿಂದ ಏಕಕಾಲಕ್ಕೆ ಸ್ವಚ್ಛತಾ ಜಾಗೃತಿ ಜಾಥಾ ನಡೆಸಲಾಯಿತು.


























