Home ಜಿಲ್ಲೆ ಮೈಸೂರು ಸಚ್ಚಿದಾನಂದ ಆಶ್ರಮದಲ್ಲಿ ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನವಿದೆ

ಸಚ್ಚಿದಾನಂದ ಆಶ್ರಮದಲ್ಲಿ ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನವಿದೆ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.25:
– ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.


ಭಾನುವಾರ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 84ನೇ ಜನ್ಮದಿನೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇಂದು ಜಗತ್ತಿನಲ್ಲಿ ಕಾಣುವ ಎಲ್ಲಾ ಸಂಶೋಧನೆಗಳು, ಆವಿಷ್ಕಾರಗಳನ್ನು ಸಾವಿರ ವರ್ಷಗಳ ಹಿಂದೆ ತಮ್ಮ ದಿವ್ಯ ಜ್ಞಾನದಿಂದ ತಿಳಿದು ಜಗತ್ತಿಗೆ ಅಪೂರ್ವ ಕೊಡುಗೆ ಕೊಟ್ಟವರು ಭಾರತೀಯ ಋಷಿಮುನಿಗಳು ಎಂದು ತಿಳಿಸಿದರು.
ವೈಜ್ಞಾನಿಕವಾಗಿ ನಾವು ಕಾಣುವ ಮೆಟಾಫಿಸಿಕ್ಸ್ ಇರಬಹುದು ಅಥವಾ ಯಾವುದೇ ಕ್ಷೇತ್ರ ತೆಗೆದುಕೊಳ್ಳಬಹುದು. ಹಿಂದೆ ಅವರಿಗೆ ಯಾವುದೇ ಉಪಕರಣಗಳಾಗಲಿ, ಇನ್ಸ್ಟ್ರುಮೆಂಟ್ ಆಗಲಿ, ಮೈಕ್ರೋಸ್ಕೋಪ್ ಆಗಲಿ ಇರಲಿಲ್ಲ. ಆದರೆ, ಭಗವಂತನ ಕೃಪೆಯಿಂದ ಮನುಷ್ಯ ತನ್ನನ್ನು ಸಾಧನೆಯಲ್ಲಿ ತೊಡಗಿಸಿಕೊಂಡರೆ, ಆ ಸಾಧನೆಯ ಫಲವಾಗಿ ಜಗತ್ತಿನ ಎಲ್ಲಾ ಸತ್ಯಗಳನ್ನು ಗುರುತಿಸಲು ಸಾಧ್ಯವಿದೆ ಎನ್ನುವುದು ನಮ್ಮ ಭಾರತೀಯ ಧರ್ಮ ಪರಂಪರೆ ಜಗತ್ತಿಗೆ ಕೊಟ್ಟಿರುವ ಅಪೂರ್ವ ಕೊಡುಗೆ ಎಂದು ನುಡಿದರು.


ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ, ಜಗತ್ತಿಗೆ ಯಾವಾಗ ಅಗತ್ಯವಾಗುತ್ತದೆಯೋ, ಆಗೆಲ್ಲಾ ಮಹಾಪುರುಷರು ಅವತರಿಸುತ್ತಾ ಬರುತ್ತಾರೆ ಎನ್ನುವ ಮಾತು ಜಗತ್ತಿಗೆ ಯಾವತ್ತೂ ಸತ್ಯವಾಗಿ ಉಳಿಯುವಂತದ್ದು ಎಂದು ಹೇಳಿದರು.


ಸ್ವಾಮಿ ವಿವೇಕಾನಂದರ ಮಾತಿನಂತೆ ಸಾಧು ಸಂತರು ತಮ್ಮ ಅನುಷ್ಠಾನದಿಂದ, ತಪಸ್ಸಿನಿಂದ ಅದೆಲ್ಲಾ ಸಿದ್ಧಿಯನ್ನು ಸಮಾಜಕ್ಕೆ ಧಾರೆ ಎರೆಯುತ್ತಾ ಇರುತ್ತಾರೋ, ಅಲ್ಲಿಯವರೆಗೂ ನಮ್ಮ ದೇಶ ಸುಭಿಕ್ಷವಾಗಿರುತ್ತದೆ. ಗಣಪತಿ ಸಚ್ಚಿದಾನಂದ ಶ್ರೀಗಳು ಆಶ್ರಮವನ್ನು ಜಗತ್ತಿಗೆ ಲಭ್ಯವಾಗುವಂತೆ ಮಾಡಿ ಜಗನ್ಮಾನ್ಯವಾಗುವ ಹಾಗೆ ಮಾಡಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡು ಮಾತ್ರವಲ್ಲ, ವಿದೇಶದಲ್ಲಿರುವವರು ಕೂಡ ಶ್ರೀಗಳ ಬಗ್ಗೆ ಅಪಾg ಶ್ರದ್ಧಾಭಕ್ತಿ ಹೊಂದಿದ್ದಾರೆ ಎಂದು ಹೇಳಿದರು.


ಇದು ಜನ್ಮದಿನೋತ್ಸವದ ಸಪ್ತಾಹ ಕಾರ್ಯಕ್ರಮ. ಏಳು ದಿವಸಗಳೂ ವಿಶೇಷ ಕಾರ್ಯಕ್ರಮಗಳಿರುತ್ತವೆ. ಹೋಮ, ವಿಶೇಷ ಪೂಜೆಗಳು, ಸಂಗೀತ ಮತ್ತು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಅಗತ್ಯವಿರುವವರಿಗೆ ಅಗತ್ಯ ವಸ್ತುಗಳ ವಿತರಣೆ ಹೀಗೆ ಒಂದಲ್ಲ ಹತ್ತು ಹಲವು ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಅವಿನಾಭಾವ ಸಂಬಂಧ: ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಹಾಗೂ ಗಣಪತಿ ಸಚ್ಚಿದಾನಂದ ಸ್ವಾಮಿಗಳ ನಡುವೆ ಅನನ್ಯ ಸಂಬಂಧವಿತ್ತು. ಅವರಿಬ್ಬರೂ ಅಂತರಂಗದ ಆಂತರಿಕ ಬಾಂಧವ್ಯ ಹೊಂದಿದ್ದವರು. ಜತೆಗೆ ಅಷ್ಟೇ ಆತ್ಮೀಯತೆ ಹೊಂದಿದ್ದರು. ಗಣಪತಿ ಶ್ರೀಗಳು ರಾಜೇಂದ್ರ ಶ್ರೀಗಳ ಬಗ್ಗೆ ಹೊಂದಿದ್ದ ಅದೇ ಅಭಿಮಾನವನ್ನೇ ಇವತ್ತಿಗೂ ಶ್ರೀಮಠದ ಬಗ್ಗೆ ಇಟ್ಟುಕೊಂಡಿದ್ದಾರೆ. ಕಿರಿಯ ಶ್ರೀಗಳು ಪೂಜ್ಯರ ಮಗನಂತೆ, ಪಾಲಕರಾಗಿ ಶ್ರೀಗಳು ತೋರಿಸಿದ್ದನ್ನು ಶಿರಸಾವಹಿಸಿ ನೆರವೇರಿಸಿ ಆಶ್ರಮದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.


ಇದೇ ವೇಳೆ ಅಶ್ವತ್ಥನಾರಾಯಣ ಅವರ ದತ್ತಾವತಾರಿ ಮುಕ್ತಕ ಪಿಯೂಷ, ಮತ್ತು ಸ್ವಾಮೀಜಿಯವರ ಸೀಕ್ರೆಟ್ ಫಾರ್ ಸಕ್ಸಸ್ ಇಂಗ್ಲಿಷ್ ಪುಸ್ತಕದ ತಮಿಳು ಅನುವಾದ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.