
ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.12:- ಜಿಲ್ಲೆಯ ಗಡಿಯಂಚಿನಲ್ಲಿರುವ ತಾಳವಾಡಿ ತಾಲೂಕಿನ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯಿತು.
ಸಗಣಿ ರಾಶಿ ಹಾಕಿ ಅದರಲ್ಲಿ ಗ್ರಾಮಸ್ಥರು ಉರುಳಾಡಿ, ಹೊಡೆದಾಡಿ ಖುಷಿ ಪಡುವುದೇ ಈ ಹಬ್ಬದ ವಿಶೇಷ. ಪ್ರತಿವರ್ಷ ಬಲಿಪಾಡ್ಯಮಿ ಮಾರನೇ ದಿನ ಈ ಆಚರಣೆ ನಡೆಯಲಿದ್ದು, ನೂರಾರು ವರ್ಷಗಳಿಂದ ಈ ಹಬ್ಬ ನಡೆದುಕೊಂಡು ಬಂದಿದೆ.
ಅಂದಹಾಗೆ, ಇವರು ತಮಿಳುನಾಡಿನ ಕನ್ನಡಿಗರು. ಮಾತೃಭಾμÉ ಕನ್ನಡವೇ ಆದರೂ ತಮಿಳುನಾಡಿಗೆ ಸೇರಿರುವ ಈ ಗ್ರಾಮಸ್ಥರು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಪ್ರದಾಯದಂತೆ ಗೊರೆ ಹಬ್ಬದಲ್ಲಿ ಮಿಂದೆದ್ದರು. ಸಗಣಿ ಮಧ್ಯೆಯೇ ಹೊರಳಾಡಿ, ಒಬ್ಬರಿಗೊಬ್ಬರು ಎರಚಾಡಿ, ಹೊಡೆದಾಡಿದರು. ಕನ್ನಡಿಗರ ಈ ವಿಶಿಷ್ಟ ಆಚರಣೆಗೆ ಬುಧವಾರ ಸಹಸ್ರಾರು ಮಂದಿ ಸಾಕ್ಷಿಯಾದರು.
ಉತ್ಸಾಹದಿಂದ ಪಾಲ್ಗೊಳ್ಳುವ ಗ್ರಾಮದ ಜನ: ಗ್ರಾಮದ ಬೀರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿ ರಾಶಿ ರಾಶಿ ಸಗಣಿಯನ್ನು ದೇವಾಲಯ ಮುಂದೆ ಪೇರಿಸುತ್ತಾರೆ. ಪ್ರತಿ ಮನೆ ಮನೆಗೂ ಹೋಗಿ ಸಂಗ್ರಹಿಸಿದ್ದ ಹಾಲು ತುಪ್ಪದಲ್ಲಿ ಊರ ಮುಂಭಾಗದಲ್ಲಿರುವ ಕಾರೇಶ್ವರನಿಗೆ ಅಭಿμÉೀಕ ನಡೆಸುತ್ತಾರೆ. ಚಾಡಿಕೋರ ಎಂಬಾತನನ್ನು ಕತ್ತೆ ಮೇಲೆ ಕುಳ್ಳಿರಿಸಿ ಆತನಿಗೆ ಹಂಬಿನ ಸೊಪ್ಪು, ಹುಲ್ಲಿನ ಮೀಸೆ, ನಾಮ ಹಾಕಿ ಮೆರವಣಿಗೆಯಲ್ಲಿ ಕರೆತಂದು ಬೀರಪ್ಪನ ದೇವಾಲಯದ ಸುತ್ತಾ ಪ್ರದಕ್ಷಿಣೆ ಹಾಕುತ್ತಾರೆ. ಆ ಬಳಿಕ ಸಗಣಿ ಎರಚಾಟ ಆರಂಭಗೊಂಡು ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಇದು ಪ್ರತಿ ವರ್ಷ ನಡೆಸಿಕೊಂಡು ಬರುರುತ್ತಿರುವ ಸಂಪ್ರದಾಯವಾಗಿದೆ.
ಇಲ್ಲಿನ ಗ್ರಾಮ ದೇವರ ಇμÁ್ಟರ್ಥವಾಗಿ ಈ ಗೊರೆ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆಗೆ ನೂರಾರು ವರ್ಷಗಳ ಇತಿಹಾಸ ಕೂಡ ಇದೆ. ಸ್ಥಳೀಯರು ಹೇಳುವ ಪ್ರಕಾರ ಗ್ರಾಮದ ಕಾಳೇಗೌಡ ಎಂಬುವರ ಮನೆಗೆ ಉತ್ತರ ಪ್ರದೇಶದಿಂದ ದೇವರ ಗುಡ್ಡ(ಸ್ವಾಮೀಜಿ)ನೊಬ್ಬ ಬಂದಿದ್ದ. ಅವನು ಸತ್ತ ಮೇಲೆ ಅವನ ಜೋಳಿಗೆ, ಬೆತ್ತ, ಎಲ್ಲವನ್ನು ತಿಪ್ಪೆ ಗುಂಡಿಗೆ ಬಿಸಾಕಿದರಂತೆ. ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿ ಬಳಿಗೆ ಎತ್ತಿನ ಗಾಡಿಯೊಂದು ಹೋದಾಗ ಲಿಂಗವೊಂದು ಕಾಣಿಸಿಕೊಂಡಿತು. ಗಾಡಿಯ ಚಕ್ರ ಲಿಂಗದ ಮೇಲೆ ಹರಿದಾಗ ಅದರಿಂದ ರಕ್ತ ಬಂದಿತಂತೆ. ಆಗ ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ ಕಾಣಿಸಿಕೊಂಡು ದೀಪಾವಳಿ ಹಬ್ಬವಾದ ಮರುದಿನವೇ ಗೊರೆ ಹಬ್ಬ ಮಾಡುವಂತೆ ಹೇಳಿತು ಎಂಬ ಪ್ರತೀತಿ ಇದೆ. ಈ ಲಿಂಗ ಕಾಣಿಸಿಕೊಂಡ ತಿಪ್ಪೆಗುಂಡಿಯಲ್ಲೇ ಈಗಿನ ಬೀರಪ್ಪನ ದೇವಸ್ಥಾನ ಕಟ್ಟಿ ಗೊರೆ ಹಬ್ಬವನ್ನು ಆಚರಿಸಲಾಗುತ್ತಿದೆ.
ಗೊರೆ ಹಬ್ಬದ ಸಂಭ್ರಮ: ಹಬ್ಬ ಆರಂಭಕ್ಕೂ ಮುನ್ನ ಕೆರೆಯಂಗಳದಲ್ಲಿ ಕತ್ತೆಯನ್ನು ತೊಳೆದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಗಣಿ ಎರಚಾಡುವ ಬೀರಪ್ಪನ ಗುಡಿವರಗೆ ಕರೆ ತರುತ್ತಾರೆ. ನಂತರ ಕತ್ತೆಯನ್ನು ತೊಳೆಯಲಾಗಿದ್ದ ಕೆರೆಯಲ್ಲಿಯೇ ಎಲ್ಲರು ಸ್ನಾನ ಮಾಡಿಕೊಂಡು ಊರಿಗೆ ಬರುವಾಗ ಚಾಡಿಕೋರನನ್ನು ಹಿಯಾಳಿಸುತ್ತಾ, ಊರ ಗೌಡನನ್ನು ಅಶ್ಲೀಲ ಶಬ್ದಗಳಿಂದ ಬೈಯುತ್ತಾ ಸಂಭ್ರಮಿಸುತ್ತಾರೆ. ತಮ್ಮ ಗ್ರಾಮಕ್ಕೆ ಚಾಡಿಕೋರರು ಇರಬಾರದೆಂಬ ಉದ್ದೇಶವೂ ಈ ಆಚರಣೆ ಹಿಂದೆ ಅಡಗಿದೆ. ಹಿಂದೆ ಸುಳ್ಳು ಹೇಳುವ ವ್ಯಕ್ತಿ ಗ್ರಾಮದ ಜನರಲ್ಲಿ ದ್ವೇμÁಸೂಯೆ ಮೂಡಿಸಿ ಅಶಾಂತಿಗೆ ಕಾರಣವಾಗಿದ್ದ ಎಂಬ ಮಾತಿದೆ. ಅಂತಹ ವ್ಯಕ್ತಿಗಳಿಗೆ ಯಾವ ರೀತಿ ಶಿಕ್ಷೆ ನೀಡಲಾಗುತ್ತಿತ್ತು ಎಂಬುದರ ಸಂಕೇತವಾಗಿ ಇಬ್ಬರಿಗೆ ಚಾಡಿಕೋರರ ವೇಷ ಧರಿಸಿ ಕತ್ತೆಯ ಮೇಲೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಸಗಣಿ ರಾಶಿ ಬಳಿ ಗ್ರಾಮದ ಜನ ಜಮಾಯಿಸುತ್ತಾರೆ.





















