
‘ರುದ್ರಾಭಿಷೇಕಂ’ ಚಿತ್ರದ ಹೃದಯಸ್ಪರ್ಶಿ ಹಾಡು ಅನಾವರಣ
ಕನ್ನಡ ಜನಪದ ಸಂಸ್ಕೃತಿಯ ಘಮಘಮೆಯನ್ನು ಬೆಳ್ಳಿತೆರೆಗೆ ತರುತ್ತಿರುವ ‘ರುದ್ರಾಭಿಷೇಕಂ’ ಚಿತ್ರದ ಹೊಸ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.
ವೀರಗಾಸೆ ಕಲೆಯ ವೈಭವ, ವೀರಭದ್ರ ದೇವರ ಪೌರಾಣಿಕ ಹಿನ್ನೆಲೆ ಹಾಗೂ ಕುಟುಂಬ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಸಂತ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ ರಾಘವೇಂದ್ರ ಹಾಗೂ ಪ್ರಿಯಾಂಕ ತಿಮ್ಮೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ನಟ ವಿಜಯ ರಾಘವೇಂದ್ರ, “ವೀರಗಾಸೆ ಕಲಾವಿದನ ಪಾತ್ರ ನನ್ನ ವೃತ್ತಿಜೀವನದ ಸವಾಲಿನ ಪಾತ್ರಗಳಲ್ಲಿ ಒಂದು. ತಂದೆ ಹಾಗೂ ಮಗನಾಗಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆಯಲ್ಲಿ ಭೂತಕಾಲ ಮತ್ತು ವರ್ತಮಾನವನ್ನು ಜೋಡಿಸುವ ಪ್ರಯತ್ನ ಇದೆ” ಎಂದರು.
ನಿರ್ಮಾಪಕರಲ್ಲಿ ಒಬ್ಬರಾದ ಕೆ. ವೆಂಕಟೇಶ್ ಮಾತನಾಡಿ, “ಕಥೆ ಕೇಳಿದ ಕ್ಷಣದಿಂದಲೇ ಸಿನಿಮಾ ಮೇಲೆ ನಂಬಿಕೆ ಮೂಡಿತು. ವಿಜಯ ರಾಘವೇಂದ್ರ ಚಿತ್ರದ ಆರಂಭದಿಂದ ಕೊನೆಯವರೆಗೂ ಅಪಾರ ಬೆಂಬಲ ನೀಡಿದ್ದಾರೆ” ಎಂದು ಹೇಳಿದರು.
ನಾಯಕಿ ಪ್ರಿಯಾಂಕ ತಿಮ್ಮೇಶ್, “ಈ ಚಿತ್ರ ಒಪ್ಪಿಕೊಳ್ಳಲು ಮೂರು ಪ್ರಮುಖ ಕಾರಣಗಳಿದ್ದವು. ಶಿವಭಕ್ತೆಯಾಗಿ, ಹಳ್ಳಿ ಹುಡುಗಿಯಾಗಿ ಹಾಗೂ ನಗರ ಯುವತಿಯಾಗಿ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ” ಎಂದರು.
ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡಿ, “ಚಿತ್ರದ ಹಾಡುಗಳಿಗೆ ಕನ್ನಡದ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡಿದ್ದೇನೆ” ಎಂದು ತಿಳಿಸಿದರು.
‘ರುದ್ರಾಭಿಷೇಕಂ’ ಚಿತ್ರ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಸಂಸ್ಥೆಯ ಮೊದಲ ನಿರ್ಮಾಣವಾಗಿದ್ದು, ಮಂಜುನಾಥ ಕೆ.ಎನ್., ಎನ್. ಜಯರಾಮಪ್ಪ, ಕೆ. ವೆಂಕಟೇಶ್, ಬಿ. ಚಿದಾನಂದ ಮೂರ್ತಿ ಸೇರಿದಂತೆ ಒಂಬತ್ತು ಮಂದಿ ನಿರ್ಮಾಪಕರು ಕೈಜೋಡಿಸಿದ್ದಾರೆ.
ನಿರ್ದೇಶಕ ವಸಂತ್ ಕುಮಾರ್ ಮಾತನಾಡಿ, “ನೂರಾರು ವರ್ಷಗಳ ಇತಿಹಾಸ ಹೊಂದಿರುವ ವೀರಗಾಸೆ ಕಲೆಯ ಮಹತ್ವವನ್ನು ಜನರಿಗೆ ತಲುಪಿಸುವುದು ಚಿತ್ರದ ಉದ್ದೇಶ. ವೀರಭದ್ರ ದೇವರ ಉದ್ಭವದ ಸುತ್ತ ಕಥೆ ಸಾಗುತ್ತದೆ. ನಾನು ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ” ಎಂದರು.
ಚಿತ್ರದ ಚಿತ್ರೀಕರಣವನ್ನು ದೇವನಹಳ್ಳಿ ಸುತ್ತಮುತ್ತ, ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಹಾಗೂ ಅಘನಾಶಿನಿ ಹಿನ್ನೀರಿನ ಅಪರೂಪದ ತಾಣಗಳಲ್ಲಿ ಸುಮಾರು 50 ದಿನಗಳ ಕಾಲ ನಡೆಸಲಾಗಿದೆ. ಚಿತ್ರದಲ್ಲಿ ಬಲ ರಾಜವಾಡಿ, ವಿ. ಮನೋಹರ್, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನೀತಾ ಶೆಟ್ಟಿ ಹಾಗೂ ಮಂಜುಳಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿ. ಮನೋಹರ್ ಸಂಗೀತ ಹಾಗೂ ಮುತ್ತುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.


























