
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.05: ಕಲಿಕೆಯ ಹಂತದಲ್ಲಿಯೇ ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಕರೆ ನೀಡಿದರು.
ಅವರು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಕೋಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರ ಇಂದು ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣ ಖಾಸಗೀಕರಣದ ಫಲವಾಗಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಕೊರತೆ ಎದುರಾಗಿದೆ. ಅಂಕ ಅಧಾರಿತ ಶಿಕ್ಷಣ ಮುನ್ನೆಲೆಗೆ ಬಂದಿದ್ದು ಕಲಿತವರಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ. ಸಂಸ್ಕಾರ ರಹಿತ ಶಿಕ್ಷಣದಿಂದಲೇ ಇಂದು ವಿದ್ಯಾವಂತರು ಬ್ರಷ್ಠರು, ಸಮಾಜಘಾತಕರು ಮತ್ತು ದೇಶದ್ರೋಹಿಗಳಾಗುತ್ತಿದ್ದಾರೆ. ವಿದ್ಯಾವಂತರು ವಿನಯ ಶೀಲರಾಗಬೇಕು. ನಮ್ಮ ಜನಪದರು ಹೇಳುವಂತೆ ಆಚಾರದಲ್ಲಿ ಅರಸರಾಗಬೇಕು, ನೀತಿಯಲ್ಲಿ ಪ್ರಭುವಾಗಬೇಕು, ಜಗತ್ತಿಗೆ ಬೆಳಕು ನೀಡುವ ಜ್ಯೋತಿ ಸ್ವರೂಪರಾಗಿ ನಮ್ಮ ವಿದ್ಯಾರ್ಥಿಗಳು ಹೊರಹೊಮ್ಮಬೇಕು ಎಂದ ಹರಿಚರಣತಿಲಕ್ ಕಲಿಕಾಶ್ರದ್ದೆ ಮತ್ತು ಉನ್ನತ ಗುರಿಯಿಂದ ಸಾಧಕರಾಗಬೇಕೆಂದು ಕಿವಿಮಾತು ಹೇಳಿದರು.
ಅಂಗೈಯಗಲದ ಮೊಬೈಲ್‍ನಲ್ಲಿ ಜಗತ್ತಿನ ಜ್ಞಾನ ಬಂಡಾರವಿದೆ. ವಿದ್ಯಾರ್ಥಿಗಳು ಮೊಬೈಲ್ ಸದ್ಬಳಕೆ ಮಾಡಿಕೊಳ್ಳಬೇಕು. ಕಲಿಕೆಯ ಹಂತದಲ್ಲಿ ದುಶ್ಚಟಗಳು ಮತ್ತು ವಯೋಸಹಜ ಮನೋಕಾಮನೆಗಳಿಗೆ ಬಲಿಯಾಗದೆ ಗುರುಹಿಯರಿಗೆ ಮತ್ತು ತಂದೆ ತಾಯಿಗಳಿಗೆ ಗೌರವ ತರುವ ಕೆಲಸ ಮಾಡಬೇಕು. ಪದವಿ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡು ದೇಶದ ಸತ್ಪ್ರಜೆಗಳಾಗಿ ವಿದ್ಯಾರ್ಥಿಗಳು ಹೊರಹೊಮ್ಮುವಂತೆ ಎಂ.ಕೆ.ಹರಿಚರಣತಿಲಕ್ ಕರೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ದಿವ್ಯಾ ಮಾತನಾಡಿ ಮಹಿಳೆಯರಲ್ಲಿ ಕಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿ ಹಂತದಲ್ಲಿಯೇ ನಿಮ್ಮ ದೇಹವನ್ನು ನೀವು ತಿಳಿದುಕೊಳ್ಳಿ, ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಕಿವಿಮಾತು ಹೇಳಿದ ಡಾ.ದಿವ್ಯಾ ಗ್ರಾಮೀಣ ಪ್ರದೇಶದ ಬಹುತೇಕ ಹೆಣ್ಣುಮಕ್ಕಳು ರಕ್ತ ಹೀನತೆ ಮತ್ತು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಕಲಿಕೆಗೆ ನೀಡುವಷ್ಟೇ ಆದ್ಯತೆಯನ್ನು ಆರೋಗ್ಯ ಸಂರಕ್ಷಣೆಯ ಕಡೆಗೂ ನೀಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪೆÇ್ರ: ಸಿ.ಎಸ್.ಕೆಂಡಗಣ್ಣೇಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಂಯೋಜಕಿ ಪೆÇ್ರ:ಕೆ.ಪಿ.ಪ್ರತಿಮಾ
ಕ್ರೀಡಾ ವಿಭಾಗದ ಮಹದೇವಸ್ವಾಮಿ, ಐ.ಕ್ಯೂ.ಎ.ಸಿ ಕೋಶದ ಸಂಯೋಜಕ ಡಾ.ಜಿ.ಮಧು, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ವಿನಯಕುಮಾರ್ ಸೇರಿದಂತೆ ಹಲವರಿದ್ದರು.
































