Home ಜಿಲ್ಲೆ ವಿಜಯನಗರ: ಜಿಲ್ಲಾದ್ಯಂತ ಶಾಂತಿಯುತವಾಗಿ ಜರುಗಿದ 3ನೇ ದಿನದ ಗಣೇಶ ವಿಸರ್ಜನೆ

ವಿಜಯನಗರ: ಜಿಲ್ಲಾದ್ಯಂತ ಶಾಂತಿಯುತವಾಗಿ ಜರುಗಿದ 3ನೇ ದಿನದ ಗಣೇಶ ವಿಸರ್ಜನೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಸೆ.17 ವಿಜಯನಗರ ಜಿಲ್ಲಾಧ್ಯಂತ ಬುಧವಾರ 3ನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮ ಭಾರಿ ಪೊಲೀಸ್ ಭದ್ರತೆ ನಡುವೆ ಅತ್ಯಂತ ಶಾಂತಿಯುತವಾಗಿ ಜರುಗಿತು.

ಜಿಲ್ಲಾ ಕೇಂದ್ರ ಹೊಸಪೇಟೆ ನಗರ ಸೇರಿದಂತೆ ಜಿಲ್ಲಾಯಾದ್ಯಂತ ಒಟ್ಟು 1432 ಸಾರ್ವಜನಿಕ ಗಣೇಶ ಮೂರ್ತಿಗಳು ಬುಧವಾರ ಸಂಜೆಯಿಂದ ರಾತ್ರಿಯವರೆಗೂ ವಿಸರ್ಜನೆಗೊಂಡವು.

ನಗರ ವ್ಯಾಪ್ತಿಯ 35 ವಾರ್ಡುಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ 198 ಸಾರ್ವಜನಿಕ ಗಣೇಶ ಮೂರ್ತಿಗಳು ಮೂರನೇ ದಿನದ ವಿಸರ್ಜನೆಗೊಂಡವು. ಬುಧವಾರ ಸಂಜೆಯಿಂದ ರಾತ್ರಿಯವರೆಗೂ ಗಣೇಶ ಮೂರ್ತಿಗಳನ್ನು ನಗರದ ಮುಖ್ಯ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಲಾಯಿತು.

ನಗರದ ಮುಖ್ಯ ರಸ್ತೆಯ ಮೂಲಕ ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಎಲ್.ಎಲ್.ಸಿ ಕಾಲುವೆಯಲ್ಲಿ 60ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆಗೊಂಡರೆ, ನಗರದ ಚಿತ್ತವಾಡ್ಗಿ, ಸಂಡೂರು ರಸ್ತೆ, ಜಂಬುನಾಥ ರಸ್ತೆ, ಬಳ್ಳಾರಿ ರಸ್ತೆ ಹಾಗೂ ಹರಿಹರ ರಸ್ತೆಯಲಿನ್ಲ ಹೆಚ್.ಎಲ್.ಸಿ ಕಾಲುವೆ ಹಾಗೂ ಟಿ.ಬಿ.ಡ್ಯಾಂ ನಲ್ಲಿ ಕೆಲ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಹೊಸಪೇಟೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 57 ಗಣೇಶ, ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 74 ಗಣೇಶ, ಚಿತ್ತವಾಡ್ಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 28, ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 26, ಟಿ.ಬಿ. ಡ್ಯಾಂ ಪೊಲೀಸ್ ಠಾಣೆಯ 13 ಗಣೇಶ ಮೂರ್ತಿಗಳು ಸೇರಿದಂತೆ ಒಟ್ಟು 198 ಸಾರ್ವಜನಿಕ ಗಣೇಶ ಮೂರ್ತಿಗಳು ಬುಧವಾರ ವಿಸರ್ಜನೆಗೊಂಡವು.ಅದೇ ರೀತಿ ವಿಶ್ವವಿಖ್ಯಾತ ಹಂಪಿಯಲ್ಲಿ 4 ಗಣೇಶ ಮೂರ್ತಿಗಳು, ಕಮಲಾಪುರದಲ್ಲಿ 25, ಮರಿಯಮ್ಮನಹಳ್ಳಿಯಲ್ಲಿ ಪಟ್ಟಣದಲ್ಲಿ 12 ಸೇರಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 76 ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು. ಜಿಲ್ಲೆಯಲ್ಲಿ ಉಳಿದ 674 ಗಣೇಶ ಮೂರ್ತಿಗಳು 5ನೇ ದಿನ ವಿಸರ್ಜನೆಗೊಳ್ಳಲಿವೆ.

ಗಣೇಶ ವಿಸರ್ಜನೆಯಲ್ಲಿ ಯುವಕರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಗಣೇಶ ವಿಸರ್ಜನೆ ಮೆರವಣಿಯಲ್ಲಿ ಮಹಿಳೆರು, ಮಕ್ಕಳು, ವೃದ್ದರು ಸೇರಿದಂತೆ ವಯಸ್ಸಿನ ಭೇದ ಭಾವವಿಲ್ಲದೆ ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆ ಸಾಗುವ ಮುಖ್ಯ ರಸ್ತೆಯಲ್ಲಿನ ಮಸೀದಿ ಬಳಿ ಮೆರವಣಿಗೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಅದೇ ರೀತಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಹಾಗೂ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ, ಕಮಲಾಪುರ, ಗಾದಿಗನೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಬುಧವಾರದ ಗಣೇಶ ವಿಸರ್ಜನೆ ಹಾಗೂ ಮೆರವಣಿಗೆ ಶಾಂತಿಯುತವಾಗಿ ಜರುಗಿತು.

ಭಾರಿ ಪೊಲೀಸ್ ಬಂದೋಬಸ್ತ್:

3ನೇ ದಿನದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಂದತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಜಿಲ್ಲಾದ್ಯಂತ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 3 ಜನ ಡಿವೈಎಸ್ಪಿ, 14 ಜನ ಪಿಐ ಗಳು, 27 ಪಿಎಸೈ, 76 ಎಎಸೈ, 550 ಹೆಚ್ಸಿ/ಪಿಸಿ, 450 ಗೃಹ ರಕ್ಷಕದಳದ ಸಿಬ್ಬಂದಿ, 3 ಕೆ.ಎಸ್.ಆರ್.ಪಿ, 8 ಡಿ.ಎ.ಆರ್ ತುಕಡಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.

ವಿಸರ್ಜನೆಗೆ ಸೂಕ್ತ ವ್ಯವಸ್ಥೆ:

ಗಣೇಶ ವಿಸರ್ಜನೆಗೊಳ್ಳುವ ಮುಖ್ಯ ಸ್ಥಳ ಸ್ಟೇಷನ್ ರಸ್ತೆಯಲ್ಲಿರುವ ಎಲ್.ಎಲ್.ಸಿ ಕಾಲುವೆ ಬಳಿ ಪೊಲೀಸ್ ಭದ್ರತೆ ಜೊತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ, ನುರಿತ ಈಜುಗಾರರು, ಆಂಬುಲೆನ್ಸ್ ನಿಯೋಜಿಸಲಾಗಿತ್ತು. ಅಲ್ಲದೆ ಗಣೇಶ ವಿಸರ್ಜನೆಗೊಳ್ಳುವ ಎಲ್ಲಾ ಸ್ಥಳಗಳಲ್ಲಿ ಜಿಲ್ಲಾಡಳಿತದಿಂದ ಬ್ಯಾರಿಕೇಡ್, ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.

ಸ್ಥಳದಲ್ಲಿ ಎಸ್ಪಿ ಮೊಕ್ಕಾಂ:

3ನೇ ದಿನದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಗಣೇಶ ವಿಸರ್ಜನೆ ಆರಂಭದಿಂದ ಅಂತ್ಯದವರೆಗೆ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿ ನಿಭಾಯಿಸಿದರು. ಇವರಿಗೆ ಹೊಸಪೇಟೆ ಡಿವೈಎಸ್ಪಿ ಪಿ.ಮುರಳೀಧರ್, ಪಿಐ ಗಳಾದ ಡಿ.ಹುಲುಗಪ್ಪ, ಗುರುರಾಜ ಕಟ್ಟಿಮನಿ, ಸೋಮ್ಲಾ ನಾಯ್ಕ್, ಫೈಜುಲ್ಲಾ, ಮಹಮದ್ ಗೌಸ್, ಗೋವಿಂದ ಮತ್ತವರ ಸಿಬ್ಬಂದಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು, ಸ್ವಯಂ ಸೇವಕರು ಸಾಥ್ ನೀಡಿದರು.

ವಿಸರ್ಜನೆ ಸ್ಥಳದಲ್ಲಿ ಎಸ್ಪಿ:

ಗಣೇಶ್ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಎಸ್ಪಿ ಎಸ್.ಜಾಹ್ನವಿ ಅವರು ನಗರದ ಎಲ್ಲಾ ಗಣೇಶ ಮೂರ್ತಿಗಳು ವಿಸರ್ಜನೆ ಆಗುವವರೆಗೆ ಎಲ್.ಎಲ್.ಸಿ ಕಾಲುವೆ ಬಳಿಯ ಗಣೇಶ ವಿಸರ್ಜನೆ ಆಗುವ ಸ್ಥಳದಲ್ಲಿಯೇ ಇದ್ದು. ಪರಿಸ್ಥಿತಿ ನಿಭಾಯಿಸಿದರು.

ಡಿಜೆ ಸದ್ದು:

ವಿಜಯನಗರ ಜಿಲ್ಲಾದ್ಯಂತ ಗಣೇಶ ಹಬ್ಬದಲ್ಲಿ ಶಾಂತಿ, ಸುವವ್ಯಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಡಿಜೆ ಬ್ಯಾನ್ ಮಾಡಿದ್ದರೂ, ಮೆರವಣಿಗೆಯಲ್ಲಿ ಡಿಜೆ ಸದ್ದು ಜೋರಾಗಿ ಕೇಳಿ ಬಂದಿತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟರು. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಡಿಜೆ ಸದ್ದು ಜೋರಾಗಿತ್ತು.