
ಬೆಂಗಳೂರು, ನ.7: ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದ ತಾಂತ್ರಿಕ ಸವಾಲುಗಳಿಗೆ ನಾವೀನ್ಯ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆಯೋಜಿಸಿದ್ದ ಮೂರನೇ ಆವೃತ್ತಿಯ ಲ್ಯಾಮ್ ರಿಸರ್ಚ್ ಚಾಲೆಂಜ್-2026ರಲ್ಲಿ ಐಐಟಿ ಗುವಾಹಟಿ ತಂಡ ಒಟ್ಟಾರೆ ವಿಜೇತರಾಗಿ ಹೊರಹೊಮ್ಮಿದೆ.
ಐಐಟಿ ರೋಪರ್ ದ್ವಿತೀಯ ಹಾಗೂ ಎನ್ಐಟಿ ಕ್ಯಾಲಿಕಟ್ ತೃತೀಯ ಸ್ಥಾನ ಪಡೆದಿವೆ.ದೇಶದ 23 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ 189 ಕಾಲೇಜುಗಳ 803 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸುಮಾರು 3,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯ ಅಂತಿಮ ಸುತ್ತಿಗೆ 25 ತಂಡಗಳು ಆಯ್ಕೆಯಾಗಿದ್ದವು. ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನ.5 ಮತ್ತು 6ರಂದು ನಡೆದ ಅಂತಿಮ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ ಮತ್ತು ನಾವೀನ್ಯ ಪರಿಹಾರಗಳನ್ನು ಪ್ರದರ್ಶಿಸಿದರು.
ವಿಜೇತ ತಂಡಗಳು ಒಟ್ಟು 10 ಲಕ್ಷ ರೂ. ನಗದು ಬಹುಮಾನ ಹಂಚಿಕೊಂಡಿದ್ದು, ಆಯ್ದ ವಿದ್ಯಾರ್ಥಿಗಳಿಗೆ ಲ್ಯಾಮ್ ರಿಸರ್ಚ್ನಲಿ ಇಂಟರ್ನ್ಶಿಪ್ ಅವಕಾಶವನ್ನೂ ನೀಡಲಾಗಿದೆ.
ಈ ಕುರಿತು ಮಾತನಾಡಿದ ಲ್ಯಾಮ್ ರಿಸರ್ಚ್ ಇಂಡಿಯಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಂಗೇಶ್ ರಾಘವನ್, ಸೆಮಿಕಂಡಕ್ಟರ್ ಉದ್ಯಮದ ಸಂಕೀರ್ಣ ಸವಾಲುಗಳನ್ನು ಎದುರಿಸಲು ಬಹುಶಿಸ್ತೀಯ ಜ್ಞಾನ ಮತ್ತು ಸಿಸ್ಟಮ್ಸ್ ಎಂಜಿನಿಯರಿಂಗ್ ಕೌಶಲ ಹೊಂದಿರುವ ಯುವ ಪ್ರತಿಭೆಗಳ ಅಗತ್ಯವಿದೆ ಎಂದರು. ಭಾರತದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಅಗತ್ಯವಿರುವ ನುರಿತ ಮಾನವ ಸಂಪನ್ಮೂಲ ಬೆಳೆಸಲು ಲ್ಯಾಮ್ ರಿಸರ್ಚ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಐಐಎಸ್ಸಿ ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಸಹಯೋಗದ ಸೆಮಿವರ್ಸ್ ಯೋಜನೆಯಡಿ ಮುಂದಿನ ಹತ್ತು ವರ್ಷಗಳಲ್ಲಿ 60 ಸಾವಿರ ಎಂಜಿನಿಯರ್ಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.





















