
ಸಂಜೆವಾಣಿ ನ್ಯೂಸ್
ಮೈಸೂರು, ನ.19:- ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ತನ್ನ ಆಡಳಿತಾತ್ಮಕ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುತ್ತಿರುವ ಅನುದಾನದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದ ಅನುದಾನ ಬಂದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಆದರೆ, 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಗ್ರಾಮ ಪಂಚಾಯತಿಗಳಿಗಾಗಿ 2,133.25 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ಇ-ಗ್ರಾಮ ಸ್ವರಾಜ್ ಪೆÇೀರ್ಟಲ್ ದಾಖಲೆಗಳ ಪ್ರಕಾರ ಪಂಚಾಯತಿಗಳಿಗೆ ತಲುಪಿರುವುದು ಕೇವಲ 1,907 ಕೋಟಿ ಮಾತ್ರ. ಇದರಲ್ಲಿ ಸುಮಾರು 225 ಕೋಟಿ ವ್ಯತ್ಯಾಸ ಕಂಡುಬಂದಿದೆ. ನಿಯಮದ ಪ್ರಕಾರ ಕೇಂದ್ರದಿಂದ ಹಣ ಬಂದ 10 ದಿನಗಳ ಒಳಗೆ ರಾಜ್ಯ ಸರ್ಕಾರ ಪಂಚಾಯತಿಗಳಿಗೆ ಹಣ ಬಿಡುಗಡೆ ಮಾಡಿ ಸಂಪೂರ್ಣ ದಾಖಲೆ ಸಲ್ಲಿಸಬೇಕು. ಹಿಂದಿನ ದಾಖಲೆಗಳನ್ನು ಸರಿಯಾಗಿ ನೀಡದ ಕಾರಣ ಮುಂದಿನ ಅನುದಾನ ತಡೆಹಿಡಿಯಲಾಗಿದೆ. ಅನುದಾನ ಬಿಡುಗಡೆ ಮಾಡಿರುವ ಕುರಿತು ನಾನು ಯಾವ ಚರ್ಚೆಗೂ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಚುನಾವಣೆ ನಡೆಸಿ: ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಹಾಗೂ ರಾಜ್ಯದ 13 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸದೆ ರಾಜ್ಯ ಸರ್ಕಾರ ಮುಂದೂಡುತ್ತಲೇ ಬರುತ್ತಿದೆ. ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ಕಾನೂನಿನ ಪ್ರಕಾರವೇ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದಿದ್ದರೆ ಕೇಂದ್ರದ ಅನುದಾನ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರ ತಾನೇ ಮಾಡಿದ ಕಾನೂನನ್ನು ಗಾಳಿಗೆ ತೂರಿದ್ದರಿಂದ ಇಂದು ಗ್ರಾಮಗಳಲ್ಲಿ ಬೀದಿ ದೀಪ, ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದು ದೂರಿದರು.
ಗ್ಯಾರಂಟಿ ಯೋಜನೆಗಳ ವೈಫಲ್ಯ: ರಾಜ್ಯದಲ್ಲಿ ಬರಗಾಲ ಶುರುವಾಗಿ ಆರು ತಿಂಗಳಾದರೂ ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಮೊದಲಿಗೆ ರೈತರಿಗೆ 2,500 ರೂ ನೀಡುವುದಾಗಿ ಹೇಳಿ, ನಂತರ 5,000 ರೂ ಕೊಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದರು. ಆದರೆ ರೈತರ ಖಾತೆಗೆ ಕೇವಲ 1,000 ದಿಂದ 1,500 ಜಮೆಯಾಗುತ್ತಿದ್ದು, ಕೇಳಿದರೆ ಕಂಪ್ಯೂಟರ್ ಮಿಸ್ಟೇಕ್ ಎನ್ನುವ ಸಬೂಬು ನೀಡುತ್ತಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಹಣವಿಲ್ಲದ ಕಾರಣ ಬೆಳಗಾವಿ, ಹಾವೇರಿ, ಧಾರವಾಡ ಸೇರಿದಂತೆ ರಾಜ್ಯದ 184 ಫಲಾನುಭವಿಗಳು ಮೃತಪಟ್ಟಿದ್ದಾರೆ ಎಂದು ದಾಖಲೆಗಳಲ್ಲಿ ತೋರಿಸಿ ಹಣ ಕಡಿತಗೊಳಿಸಲಾಗಿದೆ ಎಂದು ಕಿಡಿ ಕಾರಿದರು.
ಗಾರ್ಬೇಜ್ ಸಿಟಿಯಾದ ಬೆಂಗಳೂರು: ಬೆಂಗಳೂರಿನಲ್ಲಿ ಕಸ ವಿಲೇವಾರಿ ಗುತ್ತಿಗೆದಾರರಿಗೆ ಕಳೆದ 5 ತಿಂಗಳಿಂದ ಸಂಬಳ ನೀಡದ ಕಾರಣ ನಗರ ಗಾರ್ಬೇಜ್ ಸಿಟಿಯಾಗಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ಪಿಂಚಣಿ ಕಳೆದ 5-6 ತಿಂಗಳಿಂದ ಸ್ಥಗಿತಗೊಂಡಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಅಂಗವಿಕಲರು ಮತ್ತು ಕುರುಡರು ವಿಧಾನಸೌಧದವರೆಗೆ ಪ್ರತಿಭಟನೆ ನಡೆಸುವಂತಾಗಿದೆ. ಅಲ್ಲದೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಪ್ರಿಯಾಂಕಾ ಗಾಂಧಿ ನೀಡಿದ್ದ 15,000 ರೂ ಗೌರವಧನದ ಭರವಸೆ ಈಡೇರಿಲ್ಲ. ಎಚ್.ಡಿ.ಕೋಟೆಯ ಆಸ್ಪತ್ರೆಯೊಂದರಲ್ಲಿ 12 ಸಿಬ್ಬಂದಿ ಬದಲಿಗೆ ಕೇವಲ ಒಬ್ಬ ವಾಚ್ಮನ್ ಮಾತ್ರ ಇದ್ದು, ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ ಎಂದು ಸರ್ಕಾರದ ಆಡಳಿತ ವೈಖರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಅನಿಲ್ ಥಾಮಸ್, ಮೈಸೂರು ವಿಭಾಗ ಪ್ರಭಾರಿ ಸ್ವಾಮಿ ಮರುಳಾಪುರ, ವಿಭಾಗ ಸಹ ಪ್ರಭಾರಿ ಡಾ.ಇ.ಸಿ.ನಿಂಗರಾಜೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕೆ.ರುದ್ರಮೂರ್ತಿ, ಪರೀಕ್ಷಿತ್ ರಾಜೇ ಅರಸ್, ಪಾಪಣ್ಣ, ನಗರ ಸಹ ವಕ್ತಾರ ಜಯಶಂಕರ್, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಂತೋಷ್ ಕುಮಾರ್ ಇದ್ದರು.





















