Home ಜಿಲ್ಲೆ ಮೈಸೂರು ಮೂರು ದಶಕ ಸೇವೆ ಸಲ್ಲಿಸಿರುವ ಪ್ರಶಾಂತ ಆನೆಗೆ ಈ ಬಾರಿ ಅಂಬಾರಿ ಹೊರುವ ಗೌರವ

ಮೂರು ದಶಕ ಸೇವೆ ಸಲ್ಲಿಸಿರುವ ಪ್ರಶಾಂತ ಆನೆಗೆ ಈ ಬಾರಿ ಅಂಬಾರಿ ಹೊರುವ ಗೌರವ

ಸಂಜೆವಾಣಿ ನ್ಯೂಸ್
ಮೈಸೂರು:ಅ.15:-
ಮೂರು ದಶಕಗಳಿಗೂ ಹೆಚ್ಚು ಕಾಲ ಅರಣ್ಯ ಇಲಾಖೆ ಮತ್ತು ದಸರಾ ಉತ್ಸವದಲ್ಲಿ ಸೇವೆ ಸಲ್ಲಿಸಿರುವ ಪ್ರಶಾಂತ ಆನೆಗೆ ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುವ ಮಹತ್ವದ ಜವಾಬ್ದಾರಿ ಒಲಿದಿದೆ.


ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಅಂಬಾರಿ ಆನೆಯಾಗಿ ಪ್ರಶಾಂತ ಆಯ್ಕೆಯಾಗಿರುವುದು ವಿಶೇಷ ಗಮನ ಸೆಳೆದಿದೆ. ಬಲಿಷ್ಠ ದೇಹ, ಗಂಭೀರ ನಡವಳಿಕೆ, ಶಿಸ್ತು ಮತ್ತು ಆಜ್ಞಾಪಾಲನೆಗೆ ಹೆಸರಾಗಿರುವ ಪ್ರಶಾಂತ ದಸರಾ ಆನೆಗಳ ಪೈಕಿ ಪ್ರಮುಖ ಸ್ಥಾನ ಪಡೆದಿದೆ.
1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯದಲ್ಲಿ ಅರಣ್ಯ ಇಲಾಖೆಯು ಪ್ರಶಾಂತ ಆನೆಯನ್ನು ಸೆರೆಹಿಡಿದಿತ್ತು. ಬಳಿಕ ವಿಶೇಷ ತರಬೇತಿ ನೀಡಿ ಇಲಾಖೆಯ ವಿವಿಧ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಲಾಯಿತು. ತನ್ನ ಶಕ್ತಿ, ತಾಳ್ಮೆ ಮತ್ತು ನಂಬಿಕಸ್ಥ ಸ್ವಭಾವದಿಂದ ಇಲಾಖೆಯ ಕಾರ್ಯಾಚರಣೆಗಳಲ್ಲಿ ಮೌಲ್ಯಯುತ ಸೇವೆ ಸಲ್ಲಿಸಿದೆ.
ಕಳೆದ 15 ವರ್ಷಗಳಿಂದ ನಿರಂತರವಾಗಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಪ್ರಶಾಂತ ಉತ್ಸವದ ಪರಿಚಿತ ಆನೆಗಳಲ್ಲಿ ಒಂದಾಗಿದೆ. ಶಿಸ್ತಿನ ನಡೆ ಮತ್ತು ತರಬೇತುದಾರರ ಆಜ್ಞೆ ಪಾಲಿಸುವ ಗುಣದಿಂದ ತನ್ನದೇ ಆದ ಗುರುತು ಗಳಿಸಿದೆ.


ಜಂಬೂಸವಾರಿ ಸಂದರ್ಭದಲ್ಲಿ ಅಂಬಾರಿ ಆನೆಯ ಸುತ್ತಲಿನ ವ್ಯವಸ್ಥೆಯಲ್ಲಿ ಇತರ ಆನೆಗಳ ಪಾತ್ರವೂ ಮಹತ್ವದ್ದಾಗಿದ್ದು, ಬಲಿಷ್ಠ ಮೈಕಟ್ಟು ಹೊಂದಿರುವ ಪ್ರಶಾಂತ ಮೆರವಣಿಗೆಯ ಶಿಸ್ತು ಮತ್ತು ಭದ್ರತೆಗೆ ಸಹಕಾರಿಯಾಗುವ ಸಾಮಥ್ರ್ಯ ಹೊಂದಿದೆ.
ಮೂರು ದಶಕಗಳ ಸೇವಾ ಅನುಭವ ಮತ್ತು ದೀರ್ಘಕಾಲದ ದಸರಾ ಭಾಗವಹಿಸುವಿಕೆಯೊಂದಿಗೆ ಪ್ರಶಾಂತ ಆನೆ ಮೈಸೂರು ದಸರಾ ಪರಂಪರೆಯ ಜೀವಂತ ಸಂಕೇತವಾಗಿ ಗುರುತಿಸಿಕೊಂಡಿದೆ. ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದ ನಾಡಹಬ್ಬದ ವೈಭವದವರೆಗೆ ಸಾಗಿರುವ ಅದರ ಪಯಣಕ್ಕೆ ಈ ಗೌರವ ಸಂದ ಮನ್ನಣೆಯಾಗಿದೆ.