Home ಜಿಲ್ಲೆ ಮಂಗಳೂರು ಮುಂಗಾರು ಬೆಳೆ ಸಮೀಕ್ಷೆ ಪ್ರಾರಂಭ

ಮುಂಗಾರು ಬೆಳೆ ಸಮೀಕ್ಷೆ ಪ್ರಾರಂಭ

ಮಂಗಳೂರು- ೨೦೨೬-೨೭ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಪ್ರಾರಂಭವಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರಗಳನ್ನು ತಾವೇ ಸ್ವತಃ ತಮ್ಮ ಮೊಬೈಲ್ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ಸರ್ಕಾರ ಸಂಗ್ರಹಿಸುತ್ತದೆ.
ಬೆಳೆ ಸಮೀಕ್ಷೆಯಲ್ಲಿ ರೈತರು ನೇರವಾಗಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಸ್ವತಃ ತಾವೇ ತಮ್ಮ ಆ?ಯಂಡ್ರಾಯ್ಡ್ ಮೊಬೈಲ್ನ ಪ್ಲೇಸ್ಟೋರ್ನಲ್ಲಿ “ಮುಂಗಾರು ರೈತರ ಬೆಳೆ ಸಮೀಕ್ಷೆ ೨೬-೨೭” ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕ ತಾವು ಬೆಳೆದ ಬೆಳೆಗಳ ಛಾಯಾಚಿತ್ರ ಮತ್ತು ಬೆಳೆ ವಿವರಗಳನ್ನು ಅಪೊಲೀಡ್ ಮಾಡಬಹುದು.
ರೈತರಿಗೆ ಅಪೊಲೀಡ್ ಮಾಡಲು ಸಾಧ್ಯವಾಗದಿದ್ದಲ್ಲಿ ತಾಲ್ಲೂಕು ಆಡಳಿತ/ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳು ನೇಮಿಸಿರುವ ಮೊಬೈಲ್ ತಂತ್ರಾಂಶ ಜ್ಞಾನವುಳ್ಳ ಸ್ಥಳೀಯ ‘ಖಾಸಗಿ ನಿವಾಸಿಗಳ’ ಸಹಾಯದಿಂದ ಬೆಳೆ ವಿವರ ದಾಖಲಿಸಬಹುದು. ರೈತರು ಅಥವಾ ಖಾಸಗಿ ನಿವಾಸಿಗಳು ಛಾಯಾಚಿತ್ರದೊಂದಿಗೆ ನಮೂದಿಸಿದ ಬೆಳೆ ಮಾಹಿತಿಯನ್ನು ತಾಲೂಕು ಆಡಳಿತ ಪರಿಶೀಲಿಸಿ ಅನುಮೋದಿಸುತ್ತದೆ.
ರೈತರು ಬೆಳೆ ಸಮೀಕ್ಷೆಯ ಮಾಹಿತಿಯನ್ನು ಕೂಡ ತಾವೇ ‘ಬೆಳೆ ದರ್ಶಕ್ ಮೊಬೈಲ್ ಆಪ್ ಮೂಲಕ ಪರಿಶೀಲಿಸಿಕೊಳ್ಳಬಹುದು. ವ್ಯತ್ಯಾಸಗಳು ಕಂಡು ಬಂದಲ್ಲಿ ರೈತರು ನೇರವಾಗಿ ತಮ್ಮ ಆಕ್ಷೇಪಣೆಯನ್ನು ಬೆಳೆ ದರ್ಶಕ ಮೊಬೈಲ್ ಆಪ್ನಲ್ಲಿ ದಾಖಲಿಸಿ ಸಲ್ಲಿಸಬಹುದು.
ಬೆಳೆ ಸಮೀಕ್ಷೆ ಮೂಲಕ ಬೆಳೆ ವಿವರ ದಾಖಲು ಮಾಡುವುದರಿಂದ ಆಗುವ ಪ್ರಯೋಜನಗಳು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ಅಡಿಕೆ ಹಾಗು ಕಾಳು ಮೆಣಸು ಬೆಳೆ ವಿಮೆ ಪಡೆಯಲು.
ಬೆಳೆ ನಷ್ಟ ಪರಿಹಾರ: ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸರ್ಕಾರದಿಂದ ಸಿಗುವ ಪರಿಹಾರ ಧನ ಪಡೆಯಲು.
ಫಸಲ್ ಭೀಮಾ (ಬೆಳೆ ವಿಮೆ): ಬೆಳೆ ವಿಮೆ ಯೋಜನೆಯಡಿ ಪರಿಹಾರ ಪಡೆಯಲು.
ಕನಿಷ್ಠ ಬೆಂಬಲ ಬೆಲೆ : ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಲು.
ಪಹಣಿ : ಪಹಣಿಯಲ್ಲಿ ನಿಖರ ಬೆಳೆ ನಮೂದಿಸಲು ಅನುಕೂಲವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ, ಗ್ರಾಮ ಆಡಳಿತಾಧಿಕಾರಿ, ಕಂದಾಯ ಇಲಾಖೆ, ತೋಟಗಾರಿಕಾ ಅಧಿಕಾರಿಯವರನ್ನು ಸಂಪರ್ಕಿಸಬಹುದು. ಆಪ್ನಲ್ಲಿ ಮಾಹಿತಿ ನಮೂದಿಸಲು ಸೆಪ್ಟೆಂಬರ್ ೩೦ ಕೊನೆಯ ದಿನ. ರೈತರು ನಿಗದಿಪಡಿಸಿದ ಅವಧಿಯೊಳಗೆ ತಮ್ಮ ವಿವರಗಳನ್ನು ಉಚಿತವಾಗಿ ದಾಖಲಿಸಬಹುದು ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.