
ಮಂಗಳೂರು- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಎಲ್ಲಾ ಘನತ್ಯಾಜ್ಯ ಉತ್ಪಾದಕರು ಕಡ್ಡಾಯವಾಗಿ ತ್ಯಾಜ್ಯವನ್ನು ಮೂಲದಲ್ಲೇ ಕೆಳಕಂಡ ೪ ವಿಧಗಳಾಗಿ ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕಿರುತ್ತದೆ.
ಹಸಿ ತ್ಯಾಜ್ಯ : ಅಡುಗೆ ಮನೆ ತ್ಯಾಜ್ಯ, ಹಣ್ಣು-ತರಕಾರಿ ಸಿಪ್ಪೆಗಳು, ಉಳಿದ ಆಹಾರ, ಮಾಂಸದ ತ್ಯಾಜ್ಯ, ಮೊಟ್ಟೆಯ ಕವಚ, ಹೂವು, ಎಲೆಗಳು ಮುಂತಾದವು (ಪ್ರತಿದಿನ ಸಂಗ್ರಹಿಸಲಾಗುತ್ತದೆ).
ಒಣ ತ್ಯಾಜ್ಯ: ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಕಾಗದ/ಪೇಪರ್, ಕಾರ್ಡ್ಬೋರ್ಡ್, ರಬ್ಬರ್ ಮುಂತಾದವು (ಪ್ರತಿ ಶುಕ್ರವಾರದಂದು ಮಾತ್ರ ಸಂಗ್ರಹಿಸಲಾಗುತ್ತದೆ).
ನೈರ್ಮಲ್ಯ ತ್ಯಾಜ್ಯ: ಬಳಸಿದ ಸ್ಯಾನಿಟರಿ ಪ್ಯಾಡ್ಗಳು, ಡೈಪರ್ಗಳು, ಬ್ಯಾಂಡೇಜ್ಗಳು, ಕಾಂಡೋಮ್ಗಳು ಮುಂತಾದವು (ಪ್ರತಿದಿನ ಸಂಗ್ರಹಿಸಲಾಗುತ್ತದೆ).
ವಿಶೇಷ ಕಾಳಜಿ ತ್ಯಾಜ್ಯ: ಹಳೆಯ ಬ್ಯಾಟರಿಗಳು, ಎಲ್.ಇ.ಡಿ ಬಲ್ಬ್ಗಳು, ಟ್ಯೂಬ್ಲೈಟ್ಗಳು, ಪೇಂಟ್ ಡಬ್ಬಿಗಳು, ಕೀಟನಾಶಕಗಳ ಬಾಟಲಿಗಳು, ಥರ್ಮಾಮೀಟರ್ಗಳು ಮುಂತಾದ ಅಪಾಯಕಾರಿ ತ್ಯಾಜ್ಯಗಳು (ಪ್ರತಿ ಶುಕ್ರವಾರದಂದು ಮಾತ್ರ ಸಂಗ್ರಹಿಸಲಾಗುತ್ತದೆ).
ಈ ಕುರಿತಂತೆ ಸಾರ್ವಜನಿಕರು ತಮ್ಮ ಹಂತದಲ್ಲೇ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಂಗಡಿಸಿ ಪಾಲಿಕೆಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಹಸ್ತಾಂತರಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಒಂದು ತಿಂಗಳ ನಂತರ ಕಡ್ಡಾಯವಾಗಿ ಮೂಲದಲ್ಲೇ ವಿಂಗಡಿಸಿದ ತ್ಯಾಜ್ಯವನ್ನು ಮಾತ್ರ ಪಾಲಿಕೆಯ ವತಿಯಿಂದ ಸಂಗ್ರಹಿಸಲಾಗುತ್ತದೆ. ತಪ್ಪಿದಲ್ಲಿ ತ್ಯಾಜ್ಯವನ್ನು ಸ್ಥಳದಲ್ಲೇ ತಿರಸ್ಕರಿಸಲಾಗುತ್ತದೆ. ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳು ೨೦೧೯ ರ ಅನ್ವಯ ದಂಡ ವಿಧಿಸಲಾಗುತ್ತದೆ.
ನಗರದ ಎಲ್ಲಾ ನಾಗರಿಕರು ತ್ಯಾಜ್ಯವನ್ನು ಕಡ್ಡಾಯವಾಗಿ ಮೂಲದಲ್ಲೇ ನಾಲ್ಕು ವಿಧಗಳಾಗಿ ವಿಂಗಡಿಸಿ ನೀಡುವುದರ ಮೂಲಕ ನಗರದ ಸ್ವಚ್ಛತೆಗೆ ಸಹಕರಿಸಲು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































