
ಬೆಂಗಳೂರು, ಮೇ ೧೭- ಮಳೆ ನೀರು ಸರಾಗವಾಗಿ ಹರಿದು ಪ್ರವಾಹ ಸಮಸ್ಯೆ ಉಂಟಾಗದಂತೆ ಕಲ್ಕೆರೆ ಹಾಗೂ ಹೊಯ್ಸಳನಗರ ವ್ಯಾಪ್ತಿಯ ಎಲ್ಲಾ ಕಚ್ಚಾ ಮತ್ತು ಕಾಂಕ್ರೀಟ್ ಮಳೆ ನೀರು ಕಾಲುವೆಗಳನ್ನು ತಕ್ಷಣ ಸ್ವಚ್ಛಗೊಳಿಸುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತೆ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಲ್ಕೆರೆ-ಹೊಯ್ಸಳನಗರ ಪ್ರದೇಶಗಳಲ್ಲಿನ ಮಳೆ ನೀರು ಕಾಲುವೆಗಳಿಗೆ ಅವರು ಭಾನುವಾರ ಸ್ಥಳ ಪರಿಶೀಲನೆ ನಡೆಸಿ, ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಲ್ಕೆರೆ ಸ್ಮಶಾನ ಸಮೀಪದ ಮಳೆ ನೀರು ಕಾಲುವೆ.
ಎನ್‌ಪಿಎಸ್ ಶಾಲೆಯ ಹಿಂಭಾಗದ ಕಚ್ಚಾ ಕಾಲುವೆ
ಖಾನೆ ರಸ್ತೆ ಅಭಯ ಶಾಲೆ ಸಮೀಪದ ಕಾಲುವೆ
ಹೊಯ್ಸಳನಗರ ೩ನೇ ಮುಖ್ಯರಸ್ತೆಯ ಕಚ್ಚಾ ಕಾಲುವೆಗಳನ್ನು ಪರಿಶೀಲನೆ ನಡೆಸಿ.ಅಧಿಕಾರಿಗಳಿಗೆ
ಮಳೆಗಾಲಕ್ಕೂ ಮುನ್ನ ಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳು, ಮಣ್ಣು, ತ್ಯಾಜ್ಯ ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಿಶ್ವಬ್ಯಾಂಕ್ ಅನುದಾನದಡಿ ಕಲ್ಕೆರೆ ಹಾಗೂ ಹೊಯ್ಸಳನಗರ ಪ್ರದೇಶದ ಕಚ್ಚಾ ಮಳೆ ನೀರು ಕಾಲುವೆಗಳ ಅಭಿವೃದ್ಧಿಗೆ ಈಗಾಗಲೇ ಗುರುತಿಸಿರುವ ಪ್ರದೇಶಗಳಲ್ಲಿ ತಕ್ಷಣ ಕಾಮಗಾರಿ ಆರಂಭಿಸಿ ವೇಗ ಹೆಚ್ಚಿಸುವಂತೆ ನಿರ್ದೇಶನ ನೀಡಿದರು.
ಕೆಲವು ಕಡೆಗಳಲ್ಲಿ ಕಾಲುವೆ ಒತ್ತುವರಿ ಕಂಡುಬಂದ ಹಿನ್ನೆಲೆ, ಕಂದಾಯ ಇಲಾಖೆಯ ಸರ್ವೇ ನಕ್ಷೆಯ ಆಧಾರದಲ್ಲಿ ಕಾಲುವೆಗಳ ನೈಜ ಅಳತೆ ಪರಿಶೀಲಿಸಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು.
ಕಾಲುವೆಗಳ ಪಕ್ಕದಲ್ಲಿರುವ ಬ್ಲಾಕ್ ಸ್ಪಾಟ್‌ಗಳಿಂದ ತ್ಯಾಜ್ಯ ಸೇರುವ ನೀರಿನ ಹರಿವು ಅಡಚಣೆಯಾಗುತ್ತಿರುವುದನ್ನು ಗಮನಿಸಿದ ಅವರು, ಕೂಡಲೇ ಬ್ಲಾಕ್ ಸ್ಪಾಟ್ ತೆರವುಗೊಳಿಸಿ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಯಯೋಜನೆ ಸಿದ್ಧಪಡಿಸಿ ನಿರ್ವಹಣಾ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಭಿಯಂತರರಿಗೆ ಸೂಚನೆ ನೀಡಿದರು.
ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನು ಬಲಪಡಿಸಿ, ಪ್ರವಾಹ ಸಮಸ್ಯೆ ತಡೆದು ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ಬದ್ಧವಾಗಿದೆ ಎಂದು ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದರು.
ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

























