
ಸಂಜೆವಾಣಿ ನ್ಯೂಸ್
ಮೈಸೂರು, ಜೂ.23:- ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಅಭಿವೃದ್ಧಿಯ ಫಲವನ್ನು ಸಮಸ್ಯೆ ಬಂದಾಗ ಬಳಸಬೇಕು. ಆದರೆ, ಚೆನ್ನಾಗಿರುವಾಗಲೇ ಕ್ಷುಲ್ಲಕ ಕಾರಣಗಳಿಗೆ ಔಷಧ ಅವಲಂಬಿಸಬಾರದು. ಮಧುಮೇಹವು ಇಂದಿನ ಅಗೋಚರ ಶತ್ರು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಶ್ರೀಹರಿ ಡಯಾಬಿಟೀಸ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಡಾ.ವಿ.ಲಕ್ಷ್ಮಿನಾರಾಯಣ್ ಮತ್ತು ಡಾ. ಸೂರಜ್ ತೇಜಸ್ವಿ ಅವರ ಮಧುಮೇಹ ಮನುಕುಲದ ಅಗೋಚರ ಶತ್ರು ಕೃತಿಯ 9ನೇ ಆವೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದ ಅವರು, ಪೌಷ್ಟಿಕ ಆಹಾರ, ವ್ಯಾಯಾಮ ಮತ್ತು ಅಗತ್ಯವಿದ್ದಾಗ ಔಷಧ ಎಂಬ ತತ್ವ ಅನುಸರಿಸುವುದರಿಂದ ಆರೋಗ್ಯಕರ ಜೀವನಕ್ಕೆ ಉತ್ತಮ ಹಾದಿ ಸಿಗಲಿದೆ ಎಂದರು.
ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮ ಕೈಯಲ್ಲಿಯೇ ಇದೆ. ದಿನನಿತ್ಯ ಜೀವನದಲ್ಲಿ ಸಣ್ಣಪುಟ್ಟ ಬದಲಾವಣೆಯಿಂದ ಇದು ಸಾಧ್ಯ ಆಗುತ್ತದೆ. ಶಿಸ್ತು ಬದ್ಧ ಜೀವನದಿಂದ ಆರೋಗ್ಯಯುತವಾಗಿ ಇರಬಹುದು. ಭಾರತ ಸಾಂಸ್ಕೃತಿಕ ಹಾಗೂ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಹಿಂದಿನಿಂದಲೂ ಪ್ರಗತಿ ಕಾಣುತ್ತಿದ್ದೇವೆ. ಆಧುನಿಕ ಕಾಲದಲ್ಲಿ ಅನುಸರಿಸುತ್ತಿರುವ ತಪ್ಪಾದ ಜೀವನಶೈಲಿಯಿಂದ ಅನೇಕ ಕಾಯಿಲೆ ಕಾಣಿಸಿಕೊಳ್ಳುತ್ತಿವೆ. ಒತ್ತಡದ ನಡುವೆ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು ಎಂದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಧಾನ ಗುರುದತ್ತ ಮಾತನಾಡಿ, ವಾಸ್ತವದಲ್ಲಿ ಈ ಕೃತಿಯು 12ನೇ ಮುದ್ರಣ ಇದು. ಕುವೆಂಪು ಭಾಷಾ ಭಾರತಿಯಿಂದ ಮೊದಲು ಪ್ರಕಟವಾಗಿ ಅಲ್ಲಿಯೂ 3 ಮೂರು ಮುದ್ರಣ ಕಂಡಿತ್ತು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಉಪ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ವಿಧಾನ ಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ, ಡಾ.ಎಂ.ಜಿ.ಆರ್.ಅರಸ್, ಆರ್.ದೊಡ್ಡೇಗೌಡ, ಕೃತಿ ರಚನೆಕಾರರಾದ ಡಾ.ವಿ.ಲಕ್ಷ್ಮಿನಾರಾಯಣ್ ಮತ್ತು ಡಾ.ಸೂರಜ್ ತೇಜಸ್ವಿ ಇದ್ದರು.
























