
ಮಂಗಳೂರು: ಎಂಆರ್ಪಿಎಲ್ನ ಸಿಎಚ್ಟಿ (ಹೈಡ್ರೋ ಸಲ್ಫರ್ ಟ್ರೀಟ್ಮೆಂಟ್) ಯುನಿಟ್ನಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಬೆಂಕಿ ಅವಘಡದಲ್ಲಿ ನಾಪತ್ತೆಯಾಗಿದ್ದ ಗುತ್ತಿಗೆ ನೌಕರ ಮೃತಪಟ್ಟಿರುವುದು ದೃಢಪಟ್ಟಿದ್ದು, ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಂದಕ್ಕೆ ಏರಿಕೆಯಾಗಿದೆ.
ಮೂಲ್ಕಿ ಮೂಲದ, ಸುಮಾರು ೩೦ ವರ್ಷ ಪ್ರಾಯದ ಗುತ್ತಿಗೆ ಆಧಾರಿತ ಉದ್ಯೋಗಿ ಮನೀಶ್ ಕರ್ಕೇರ ದುರಂತದ ಬಳಿಕ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಇದೀಗ ಅವರ ಮೃತದೇಹ ಸುಟ್ಟ ಗಾಯಗಳೊಂದಿಗೆ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ.




ಈ ಭೀಕರ ಅವಘಡದಲ್ಲಿ ಒಟ್ಟು ಒಬ್ಬರು ಮೃತಪಟ್ಟಿದ್ದು, ಘಟಕದಲ್ಲಿದ್ದ ರಾಜೇಶ್ ಬ್ಯಾಪ್ಟಿಸ್ಟ್ ಎಂಬುವರು ಶೇ. ೩೫ರಷ್ಟು ಸುಟ್ಟ ಗಾಯಗಳೊಂದಿಗೆ ಶ್ರೀನಿವಾಸ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಹೊರತಾಗಿ ಮತ್ತೊಬ್ಬರಿಗೆ ಗಾಯಗಳಾಗಿದ್ದು, ಪಕ್ಕದ ಕಚೇರಿಯಲ್ಲಿದ್ದ ಆರು ಮಂದಿ ಸೇರಿದಂತೆ ಒಟ್ಟು ಎಂಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಹೊರರೋಗಿ ವಿಭಾಗದಲ್ಲಿ (ಔPಆ) ಚಿಕಿತ್ಸೆ ನೀಡಲಾಗಿದೆ.
ಭಾರಿ ಸ್ಫೋಟಕ್ಕೆ ವ್ಯಾಪಕ ಹಾನಿ, ನಾಗರಿಕರ ಆಕ್ರೋಶ
ಮಂಗಳೂರು: ಎಂಆರ್ ಪಿಎಲ್ ಘಟಕ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ ಜೋಕಟ್ಟೆ, ಕಳವಾರು ಭಾಗದಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು ಪರಿಸರದ ನಿವಾಸಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೋ ಕಂಪನಿಯನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು, ಇಲ್ಲದಿದ್ದರೆ ನಮ್ಮನ್ನು ಸ್ಥಳಾಂತರ ಮಾಡಿಸಿ ಎಂದು ಆಗ್ರಹ ಮಾಡಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ಜೋಕಟ್ಟೆ, ಕಳವಾರು ಪ್ರದೇಶದ ನೂರಾರು ಮನೆಗಳು, ಮಸೀದಿ, ಚರ್ಚ್ ಗಳ ಹಂಚು ಪುಡಿಯಾಗಿವೆ. ಕಿಟಕಿ ಬಾಗಿಲುಗಳು ಒಡೆದು ಹೋಗಿದ್ದು, ಸ್ಥಳೀಯರು ಭೂಕಂಪವಾಯೆಂದು ಹೆದರಿ ಮನೆಯಿಂದ ಹೊರಗಡೆ ಓಡಿ ಬಂದಿದ್ದರು. ಜೋಕಟ್ಟೆ ಪರಿಸರದಲ್ಲಿ ಸೇರಿದ್ದ ಸಾರ್ವಜನಿಕರು ಕಂಪನಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳವಾರಿನ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಹಂಚಿನ ಮಾಡು ಪೂರ್ತಿಯಾಗಿ ಒಡೆದು ಹೋಗಿದ್ದು, ಸ್ಫೋಟದ ತೀವ್ರತೆಗೆ ಭೂಕಂಪದ ರೀತಿ ಭೂಮಿ ಕಂಪಿಸಿದ್ದರಿಂದ ಹಳೆಯ ಕಟ್ಟಡಗಳು ಅದುರಿವೆ. ಇದರಿಂದಾಗಿ ಹಂಚಿನ ಮನೆಗಳು ಬಿರುಕು ಬಿಟ್ಟಿವೆ. ಚರ್ಚ್ ಹಂಚಿನ ಮಾಡು ಒಡೆದು ಒಳಭಾಗದಲ್ಲಿ ಬಿದ್ದಿದ್ದು, ಈ ಸಂದರ್ಭದಲ್ಲಿ ಒಳಗಡೆ ಯಾರೂ ಇಲ್ಲದ ಕಾರಣ ಸಾವು- ನೋವು ಆಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿ, ಕಳವಾರಿನಲ್ಲಿ ದೇವಸ್ಥಾನ, ಮಸೀದಿಗಳಿಗೂ ಇದೇ ಸ್ಥಿತಿಯಾಗಿದೆ.ಸ್ಥಳದಲ್ಲಿ ಸೇರಿದ್ದ ಜನರೊಂದಿಗೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದು, ಎಂಆರ್ ಪಿಎಲ್ ೩ನೇ ಫೇಸ್ ೨೦೧೪ರಲ್ಲಿ ಶುರುವಾಗಿದ್ದು, ಅಲ್ಲಿಂದಲೇ ಇಲ್ಲಿ ಅನಾಹುತ ಶುರುವಾಗಿದೆ. ಆದರೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಸ್ಪಂದಿಸುತ್ತಿಲ್ಲ. ಇಲ್ಲಿ ಸ್ಫೋಟ, ಹೊಗೆ ಬರುವುದು ಮಾಮೂಲಿಯಾಗಿದೆ. ಇಷ್ಟು ದೊಡ್ಡ ತೈಲ ಸ್ಥಾವರ ಮಾಡುವಾಗ ಸ್ಥಳೀಯರನ್ನು ಎಬ್ಬಿಸಿ ಪುನರ್ವಸತಿ ಕಲ್ಪಿಸಬೇಕಿತ್ತು. ಆದರೆ ಜನರ ಅಹವಾಲನ್ನು ಕೇಳುವವರೇ ಇಲ್ಲವಾಗಿದೆ ಎಂಬ ಅಸಮಾಧಾನ ವ್ಯಾಪಕವಾಗಿ ವ್ಯಕ್ತವಾಗಿದೆ.
ಆರ್ ಪಿ ಎಲ್ ಘಟಕ ಸ್ಫೋಟ: ರಾಜ್ಯ ಸರಕಾರದಿಂದಲೂ ತನಿಖೆ ಚಿಂತನೆ; ಯು.ಟಿ. ಖಾದರ್
ಎಂ ಅರ್ ಪಿ ಎಲ್ ಘಟಕ ಸ್ಪೋಟ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾತ್ರವಲ್ಲ, ರಾಜ್ಯ ಸರ್ಕಾರದಿಂದಲೂ ತನಿಖೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಬುಧವಾರ ರಾತ್ರಿ ಸ್ಫೋಟ ಸಂಭವಿಸಿದ ಎಂ ಆರ್ ಪಿ ಎಲ್ ಘಟಕಕ್ಕೆ ಹಾಗೂ ಮೃತನ ಕುಟುಂಬಸ್ಥರ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅತ್ಯಾಧುನಿಕ ನಿರ್ವಹಣಾ ವ್ಯವಸ್ಥೆ ಹೊಂದಿರುವ ಎಂ ಆರ್ ಪಿ ಎಲ್ ನಂತಹ ಸಂಸ್ಥೆಗಳಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ನಡೆದಂತೆ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಫೋಟೋ ಘಟನೆಯಲ್ಲಿ ಮೃತಪಟ್ಟವನ ಕುಟುಂಬಕ್ಕೆ ಮಾತ್ರವಲ್ಲ ಸಂತ್ರಸ್ತ ಗಾಯಾಳುಗಳಿಗೆ ಚಿಕಿತ್ಸೆಗೆ ಎಂ ಆರ್ ಪಿ ಎಲ್ ಪರಿಹಾರ ಹಾಗೂ ವೆಚ್ಚ ಭರಿಸುವ ಬಗ್ಗೆ ಸೂಚನೆ ನೀಡಲಾಗಿದೆ. ಅಲ್ಲದೆ ಹಾನಿಗೊಂಡ ಸಂತ್ರಸ್ತರಿಗೂ ಪರಿಹಾರ ನೀಡುವ ಬಗ್ಗೆ ಮಾತುಕತೆ ನಡೆಸಲಾಗುವುದು. ಈ ಘಟನೆಗೆ ಕಾರಣ ಏನು ಎಂಬ ಬಗ್ಗೆ ಕೇಂದ್ರ ಅಧೀನದ ಎಂ ಆರ್ ಪಿ ಎಲ್ ಉನ್ನತ ಅಧಿಕಾರಿಗಳು ಸಹಜವಾಗಿ ತನಿಖೆ ನಡೆಸಲಿದ್ದಾರೆ, ರಾಜ್ಯ ಸರ್ಕಾರ ಕೂಡ ತನಿಖೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದರು.
ಎಂ ಆರ್ ಪಿ ಎಲ್ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಖಾದರ್, ಈಗಾಗಲೇ ಹಸಿರು ವಲಯಕ್ಕೆ ೨೭ ಎಕರೆ ಭೂಮಿ ವಶಪಡಿಸುವ ವಿಚಾರ ಹಸಿರು ನ್ಯಾಯಾಧೀಕರಣದ ಮುಂದೆ ಇದೆ ಹಾಗಾಗಿ ಈ ಭೂಮಿಯನ್ನು ಸ್ವಾಧೀನ ಪಡಿಸಿದರೆ ಕಂಪನಿಯ ಈ ವಲಯದ ವ್ಯಾಪ್ತಿಗೆ ಒಳಪಡುವ ಜನರನ್ನು ಅನಿವಾರ್ಯವಾಗಿ ಸ್ಥಳಾಂತರಿಸಬೇಕಾಗುತ್ತದೆ ಈ ಬಗ್ಗೆ ಕಂಪನಿ ಜೊತೆ ಮಾತುಕತೆ ನಡೆಸಲಾಗುವುದು ಎಂದರು.
ಮೃತನ ಕುಟುಂಬಕ್ಕೆ, ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಲು ಪದ್ಮರಾಜ್ ಆಗ್ರಹ
ಕಳವಾರಿನಲ್ಲಿರುವ ಎಂಆರ್ಪಿಎಲ್ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಸಂಭವಿಸಿದ ಸ್ಫೋಟದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದುರಂತ ಸಂಭವಿಸಿದ ತಕ್ಷಣವೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿವೆ.
ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಲಾಗಿದೆ. ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಮೀಪದ ಆಸ್ಪತ್ರೆಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ಸಂಪೂರ್ಣ ಸನ್ನದ್ಧವಾಗಿರಲು ಅಧಿಕಾರಿಗಳಿಗೆ ಸೂಚಿಸಿದರು.
ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ, ಕಾಂಗ್ರೆಸ್ ಹಿರಿಯ ಮುಖಂಡರಾದ ಸುಭಾಶ್ಚಂದ್ರ ಕೊಳ್ನಾಡ್, ತಾ.ಪಂ. ಮಾಜಿ ಸದಸ್ಯ ಬಶೀರ್, ಕಾಂಗ್ರೆಸ್ ವಲಯಾಧ್ಯಕ್ಷರು, ಕಾಂಗ್ರೆಸ್ನ ಪ್ರಮುಖ ನಾಯಕರು, ಕಾರ್ಯಕರ್ತರು ಜತೆಗಿದ್ದರು.
ಸಮಗ್ರ ತನಿಖೆಗೆ ಡಿವೈಎಫ್ಐ, ಸಿಪಿಎಂ ಒತ್ತಾಯ
ಮಂಗಳೂರಿನ ಎಂಆರ್ಪಿಎಲ್ ಕೋಕ್ ಸಲ್ಫರ್ ಘಟಕದ ಸಿಎಸ್ಟಿ ಮೂರನೇ ಪ್ಲಾಂಟ್ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಇದರಿಂದ ಎಂಆರ್ಪಿಎಲ್ ಸುತ್ತಮುತ್ತ ವಾಸಿಸುತ್ತಿರುವ ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಎಂಆರ್ಪಿಎಲ್ ಆಸುಪಾಸಿನ ಸುಮಾರು ೩ ಕಿಲೋಮೀಟರ್ ವಿಸ್ತೀರ್ಣದಲ್ಲಿ ಇರುವ ಕಟ್ಟಡ ಮನೆಗಳಿಗೆ ಹಾನಿಯಾಗಿದ್ದು ಈ ಹಾನಿಯು ಈ ಸ್ಪೋಟದ ಅಗಾಧತೆಯನ್ನು ತಿಳಿಸುತ್ತದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್ಐ ಮತ್ತು ಸಿಪಿಎಂ ಒತ್ತಾಯಿಸಿದೆ.
ಎಂಆರ್ಪಿಎಲ್ ವಿಸ್ತರಿತ ಯೋಜನೆಯದ ಕೋಕ್ ಸಲ್ಫರ್ ಘಟಕ ಆರಂಭಗೊಂಡ ಸಂದರ್ಭದಲ್ಲಿಯೇ ಡಿವೈಎಫ್ಐ ಇದನ್ನು ವಿರೋಧಿಸಿದ್ದು ಮತ್ತು ಇದರ ಅಪಾಯದ ಮುನ್ಸೂಚನೆಯನ್ನು ಕೂಡ ನೀಡಿತ್ತು. ಆದರೆ ಸರ್ಕಾರ ಈವರೆಗೂ ಈ ಕುರಿತು ವಹಿಸಿರುವ ಮೌನ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಡಿವ?ಎಫ್ಐ ಆರೋಪಿಸಿದೆ.
ಮೃತನ ಕುಟುಂಬಕ್ಕೆ ಪರಿಹಾರ, ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲು ಮಂಜುನಾಥ್ ಭಂಡಾರಿ ಆಗ್ರಹ
ಜೋಕಟ್ಟೆ ಸಮೀಪದ ಎಂಆರ್ಪಿಎಲ್ ಸಂಸ್ಕರಣಾ ಘಟಕದ ಕೋಕರ್ ಹೈಡ್ರೋಟ್ರೀಟರ್ ವಿಭಾಗದಲ್ಲಿ ಸಂಭವಿಸಿದ ಭಾರೀ ಸ್ಫೋಟ ದುರಂತದಲ್ಲಿ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಅತ್ಯಂತ ದಿಗ್ಭ್ರಮೆ ಮತ್ತು ಬೇಸರ ತಂದಿದೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ್ ಭಂಡಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಹಾಗೂ ಸುಟ್ಟ ಗಾಯಗಳಿಂದ ಶ್ರೀನಿವಾಸ ಆಸ್ಪತ್ರೆ, ಜೆ.ಎಂ. ಆಸ್ಪತ್ರೆ ಮತ್ತು ಎಂಆರ್ಪಿಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಬಾಪ್ಟಿಸ್ಟ್ ಸೇರಿದಂತೆ ಎಲ್ಲ ಗಾಯಾಳುಗಳಿಗೆ ಸಂಸ್ಥೆಯ ವೆಚ್ಚದಲ್ಲೇ ಉತ್ತಮ ದರ್ಜೆಯ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಮಗ್ರ ತನಿಖೆಗೆ ಐವನ್ ಡಿಸೋಜಾ ಆಗ್ರಹ
ಎಂಆರ್ಪಿಎಲ್ನಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉಂಟಾಗಿರುವ ಆಸ್ತಿ-ಪಾಸ್ತಿ ನಷ್ಟ ಹಾಗೂ ಜೀವಹಾನಿಗೆ ಸಂಬಂಧಿಸಿದಂತೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ?ಸೋಜಾ ಅವರು ಒತ್ತಾಯಿಸಿದ್ದಾರೆ.
ಸ್ಫೋಟದ ಪರಿಣಾಮವಾಗಿ ಎಂಆರ್ಪಿಎಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪದ ರೀತಿಯ ಅನುಭವ ಉಂಟಾಗಿದ್ದು, ಹಲವು ಮನೆಗಳು, ಕಟ್ಟಡಗಳು ಹಾಗೂ ಚರ್ಚ್ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಅಲ್ಲದೆ, ಘಟನೆಯಲ್ಲಿ ಒಬ್ಬರು ಮೃತಪಟ್ಟಿರುವ ಕುರಿತು ಮಾಹಿತಿ ದೊರೆತಿದ್ದು, ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಘಟನೆಯಿಂದ ಉಂಟಾಗಿರುವ ಹಾನಿಯ ಕುರಿತು ಕೂಡಲೇ ಸಮಗ್ರ ಸಮೀಕ್ಷೆ ನಡೆಸಬೇಕು. ಹಾನಿಗೊಳಗಾದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ-ಪಾಸ್ತಿಗಳ ನಷ್ಟವನ್ನು ಪರಿಶೀಲಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಐವನ್ ಡಿ?ಸೋಜಾ ಅವರು ಎಂಆರ್ಪಿಎಲ್ನ ವ್ಯವಸ್ಥಾಪಕ ನಿರ್ದೇಶಕರಾದ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮನವಿ ಮಾಡಿದ್ದಾರೆ.
ಅಲ್ಲದೆ, ಸಂಭವಿಸಿರುವ ಜೀವಹಾನಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು. ಘಟನೆಯ ನಿಖರ ಕಾರಣಗಳನ್ನು ಪರಿಶೀಲಿಸಿ, ಎಂಆರ್ಪಿಎಲ್ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಸುರಕ್ಷತಾ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸ್ಫೋಟದ ಪರಿಣಾಮವಾಗಿ ಹತ್ತಿರದ ಮನೆಗಳು, ಕಟ್ಟಡಗಳು ಹಾಗೂ ಚರ್ಚ್ಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ಎಲ್ಲಾ ಹಾನಿಗೊಳಗಾದ ಆಸ್ತಿಗಳ ಕುರಿತು ತಕ್ಷಣ ಸಮೀಕ್ಷೆ ನಡೆಸಿ ನಷ್ಟದ ಪ್ರಮಾಣವನ್ನು ನಿರ್ಧರಿಸಬೇಕು ಹಾಗೂ ಅರ್ಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಮೂಲಕ, ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಶಾಶ್ವತ ಹಾಗೂ ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಐವನ್ ಡಿ?ಸೋಜಾ ಅವರು ತಿಳಿಸಿದ್ದಾರೆ.
ಕಂಪನಿ ಅಧಿಕಾರಿಗಳ ವಿರುದ್ಧ ಎಫ್ಐಆರ್
ಮಂಗಳೂರು-ಎಂಆರ್ ಪಿಎಲ್ ತೈಲ ಸ್ಥಾವರ ಘಟಕದಲ್ಲಿ ನಡೆದ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಯಲ್ಲಿ ಒಟ್ಟು ೧೩ ಮಂದಿ ಗಾಯಗೊಂಡಿದ್ದು, ಈ ಪೈಕಿ ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ(೨೩) ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಕಾರ್ಕಳ ಹಿರ್ಗಾನ ನಿವಾಸಿ ರವಿ ಪೂಜಾರಿ ಎಂಬವರು ಎಂಆರ್ ಪಿಎಲ್ ೩ನೇ ಫೇಸ್ ನಲ್ಲಿರುವ ಘಟಕದ ನೌಕರರಿಗೆ ಊಟ, ಉಪಹಾರ ಪೂರೈಸುವ ಕೆ-ಸ್ಟಾರ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಮಧ್ಯಾಹ್ನ ೧೨.೧೫ರ ವೇಳೆಗೆ ಊಟ ವಿತರಣೆಗೆ ಬಂದಿದ್ದಾಗ ಕೋಕರ್ ಹೈಡೋ ಟ್ರೇಯರ್ ಯೂನಿಟ್ ನಲ್ಲಿ ಒಮ್ಮಿಂದೊಮ್ಮೆಲೇ ಸ್ಫೋಟ ಸಂಭವಿಸಿದೆ.
ಇದರಿಂದಾಗಿ ರವಿ ಪೂಜಾರಿ ಸೇರಿದಂತೆ ಸ್ಥಳದಲ್ಲಿದ್ದ ಘಟಕದ ನೌಕರರಾದ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ ಗಾಯಗೊಂಡಿದ್ದಾರೆ. ರಾಜೇಶ್ ಪೂಜಾರಿ ಮತ್ತು ಮನೀಶ್ ಕರ್ಕಡ ಎಂಬವರಿಗೆ ಗಂಭೀರ ಗಾಯವಾಗಿದ್ದು, ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎಂಆರ್ ಪಿಎಲ್ ಫೇಸ್ ೩ರಲ್ಲಿ ಕೋಕರ್ ಹೈಡೋ ಟೀಯರ್ ಯೂನಿಟ್ ನಲ್ಲಿ ಯಂತ್ರೋಪಕರಣಗಳನ್ನು ಯುನಿಟ್ ಮುಖ್ಯಸ್ಥರು ಮತ್ತು ಎಂಆರ್ ಪಿಎಲ್ ಸಂಸ್ಥೆಯವರು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ನಡೆದಿದೆ ಎಂದು ರವಿ ಪೂಜಾರಿಯವರ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಬಿಎನ್ಎಸ್ ೨೮೭, ೧೨೫ ಬಿ, ೧೦೬ ಅಡಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಮೃತಪಟ್ಟ ಮನೀಶ್ ಕರ್ಕಡ (೨೩) ಮುಲ್ಕಿ ಹಳೆಯಂಗಡಿ ನಿವಾಸಿಯಾಗಿದ್ದು, ಒಂದೂವರೆ ವರ್ಷದ ಹಿಂದಷ್ಟೇ ಮನೀಶ್ ಗುತ್ತಿಗೆ ನೌಕರನಾಗಿ ಎಂಆರ್. ಪಿಎಲ್ ಸೇರಿದ್ದರು. ಈತನ ಅಕಾಲಿಕ ಸಾವಿಗೆ ಸ್ಥಳೀಯರು ಮಮ್ಮಲ ಮರುಗಿದ್ದಾರೆ. ಹಳೆಯಂಗಡಿಯ ಆಲ್ಬರ್ಟ್ ಕರ್ಕಡ ಮತ್ತು ಸುನಿತಾ ಕರ್ಕಡ ದಂಪತಿಯ (ಮನೀಶ್- ಅನೀಶ್) ಇಬ್ಬರು ಅವಳಿ ಮಕ್ಕಳಲ್ಲಿ ಕಿರಿಯವನಾಗಿದ್ದು, ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದ. ಇದಲ್ಲದೆ, ಹಳೆಯಂಗಡಿ ಸಿಎಸ್ಐ ಅಮ್ಮಾನ್ ಮೆಮೋರಿಯಲ್ ಚರ್ಚ್ ಸದಸ್ಯರಾಗಿದ್ದು, ದುರಂತ ಸಾವಿಗೀಡಾದ ಹಿನ್ನೆಲೆಯಲ್ಲಿ ಸ್ನೇಹಿತರು ಮತ್ತು ಚರ್ಚ್ ಸಮುದಾಯ ಕಂಬನಿ ಮಿಡಿದಿದೆ.






















