
ಸಂಜೆವಾಣಿ ನ್ಯೂಸ್
ಮೈಸೂರು, ಜೂ.23:- ನೈರುತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (ಆರ್‍ಪಿಎಫ್) ಪ್ರಯಾಣಿಕರ ಸುರಕ್ಷತೆ ಹಾಗೂ ಮಕ್ಕಳ ರಕ್ಷಣೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಓಡಿಹೋದ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದೆ.
ಜನ-ಜಾಗರಣ ಅಭಿಯಾನ
18.06.2026 ರಂದು ಚಿಕ್ಕಜಾಜೂರು ರೈಲು ನಿಲ್ದಾಣ ಹಾಗೂ ರೈಲು ಸಂಖ್ಯೆ 56519 ಕೆಎಸ್‍ಆರ್ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ರೈಲಿನಲ್ಲಿ ಆರ್‍ಪಿಎಫ್ ಸಿಬ್ಬಂದಿ ಮತ್ತು ಸಿಗ್ನಲ್ ವಿಭಾಗದ ಸಿಬ್ಬಂದಿ ಜಂಟಿಯಾಗಿ ಪ್ರಯಾಣಿಕರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಅಪರಿಚಿತರಿಂದ ಆಹಾರ ಪದಾರ್ಥಗಳನ್ನು ಸ್ವೀಕರಿಸದಂತೆ, ಸಾಮಾನು-ಸರಂಜಾಮುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಸರ ಕಳವು, ಕಳ್ಳತನಗಳ ಬಗ್ಗೆ ಜಾಗರೂಕರಾಗಿರಲು ಪ್ರಯಾಣಿಕರಿಗೆ ಸೂಚಿಸಲಾಯಿತು. ಫುಟ್‍ಬೋರ್ಡ್‍ನಲ್ಲಿ ಪ್ರಯಾಣಿಸುವುದು, ರೈಲು ಹಳಿಗಳನ್ನು ಅಕ್ರಮವಾಗಿ ದಾಟುವುದು ಹಾಗೂ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದರಿಂದ ಉಂಟಾಗುವ ಅಪಾಯಗಳ ಕುರಿತು ಅರಿವು ಮೂಡಿಸಲಾಯಿತು. ತುರ್ತು ಸಂದರ್ಭಗಳಲ್ಲಿ ರೈಲ್ವೆ ಸಹಾಯವಾಣಿ ಸಂಖ್ಯೆ 139 ಅನ್ನು ಬಳಸುವಂತೆ ಸಲಹೆ ನೀಡಲಾಯಿತು.
ನನ್ಹೆ ಫರಿಶ್ತೆ ಯೋಜನೆಯಡಿ ಮಕ್ಕಳ ರಕ್ಷಣೆ: ನನ್ಹೆ ಫರಿಶ್ತೆ ಯೋಜನೆಯಡಿ ಆರ್‍ಪಿಎಫ್ ಅರಸೀಕೆರೆ ತಂಡವು 21.06.2026 ರಂದು ರೈಲು ಸಂಖ್ಯೆ 17309ರಲ್ಲಿ ಯಾವುದೇ ಪ್ರಯಾಣದ ದಾಖಲೆಗಳಿಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದೆ.
ರೈಲು ಸಂಖ್ಯೆ 17309ರ ಎಸ್-8 ಬೋಗಿಯಲ್ಲಿ ಇಬ್ಬರು ಮಕ್ಕಳು ಪ್ರಯಾಣಿಸುತ್ತಿರುವ ಕುರಿತು ಮೈಸೂರು ವಿಭಾಗೀಯ ಭದ್ರತಾ ನಿಯಂತ್ರಣ ಕೊಠಡಿಯಿಂದ ಮಾಹಿತಿ ಬಂದ ತಕ್ಷಣ, ಅರಸೀಕೆರೆ ಆರ್‍ಪಿಎಫ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ರೈಲಿಗೆ ತೆರಳಿ ಮಕ್ಕಳನ್ನು ಸುರಕ್ಷಿತ ವಶಕ್ಕೆ ಪಡೆದರು.
ವಿಚಾರಣೆ ವೇಳೆ, 11 ಮತ್ತು 12 ವರ್ಷದ ಈ ಮಕ್ಕಳು ತುಮಕೂರಿನ ಶಾಲೆಯೊಂದರ ವಸತಿ ನಿಲಯದಲ್ಲಿ ವಾಸವಾಗಿದ್ದು, ಮೊಹರಂ ರಜೆ ಹಿನ್ನೆಲೆಯಲ್ಲಿ ಸಹಪಾಠಿಗಳು ಮನೆಗೆ ತೆರಳಿದ್ದರೂ ತಮ್ಮ ಪೆÇೀಷಕರು ಕರೆದುಕೊಂಡು ಹೋಗಲು ಬರದ ಕಾರಣ ಬೇಸರಗೊಂಡು ಶಾಲೆಯ ಕಾಂಪೌಂಡ್ ಗೋಡೆಯನ್ನು ಹಾರಿ ಹೊರಬಂದು ಹುಬ್ಬಳ್ಳಿಯ ಕಡೆಗೆ ಹೋಗುವ ಉದ್ದೇಶದಿಂದ ರೈಲು ಹತ್ತಿದ್ದಾಗಿ ತಿಳಿಸಿದರು.
ಕಾನೂನು ಕ್ರಮಗಳನ್ನು ಅನುಸರಿಸಿ, ಮಕ್ಕಳನ್ನು ಹಾಸನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ/ಚೈಲ್ಡ್‍ಲೈನ್ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಮುಂದಿನ ಆರೈಕೆ, ಸಮಾಲೋಚನೆ ಹಾಗೂ ಪುನರ್ವಸತಿ ಕ್ರಮಗಳನ್ನು ಸಂಬಂಧಿತ ಇಲಾಖೆ ಕೈಗೊಳ್ಳಲಿದೆ.
ಆರ್‍ಪಿಎಫ್ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಮಕ್ಕಳು ಸುರಕ್ಷಿತವಾಗಿದ್ದು, ಯಾವುದೇ ಅನಾಹುತ ಸಂಭವಿಸುವುದನ್ನು ತಡೆಯಲು ಸಾಧ್ಯವಾಯಿತು. ಪ್ರಯಾಣಿಕರ ಸುರಕ್ಷತೆ ಹಾಗೂ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಯಲ್ಲಿ ಮೈಸೂರು ವಿಭಾಗದ ಆರ್‍ಪಿಎಫ್ ನಿರಂತರವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
























