Home ಜಿಲ್ಲೆ ಮೈಸೂರು ಪಿರಿಯಾಪಟ್ಟಣ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ರಸ್ತೆ: 56.50 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಪಿರಿಯಾಪಟ್ಟಣ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ರಸ್ತೆ: 56.50 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಸೆ 05 :
– ಬೆಟ್ಟದಪುರ ಪುರಾತನ ಹಾಗೂ ರಾಷ್ಟ್ರೀಯ ಮಹತ್ವದ ದೇವಸ್ಥಾನವಾಗಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರಕ್ಕೆ ರಸ್ತೆ ನಿರ್ಮಾಣವಾಗುತ್ತಿರುವುದು ಐತಿಹಾಸಿಕ ಕಾರ್ಯವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.


ಸಮೀಪದ ಮೇಗಲಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಬೆಟ್ಟಕ್ಕೆ ತೆರಳುವ ರಸ್ತೆ ನಿರ್ಮಾಣ ಕಾಮಗಾರಿ, ಹಾಗೂ ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಪ್ರವಾಸಿ ಮಂದಿರ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ?56.50 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು
ಶಾಸಕ ಕೆ. ವೆಂಕಟೇಶ್ ಅವರ ಪ್ರಯತ್ನದಿಂದ ಈ ಯೋಜನೆ ಸಾಕಾರಗೊಂಡಿದ್ದು, ಈ ಕಾಮಗಾರಿ ಅವರ ಕೊಡುಗೆಯಾಗಿ ಶಾಶ್ವತವಾಗಿ ಉಳಿಯಲಿದೆ. ಪಿರಿಯಾಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು, ಲೋಕೋಪಯೋಗಿ ಇಲಾಖೆಯಿಂದ ರಾಜ್ಯಾದ್ಯಂತ ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಫುಟ್‍ಬ್ರಿಡ್ಜ್‍ಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಮಾತನಾಡಿ ಹಲವು ವರ್ಷಗಳ ಭಕ್ತರು ಹಾಗೂ ಗ್ರಾಮಸ್ಥರ ಬೇಡಿಕೆಯಾಗಿದ್ದ ದೇವಸ್ಥಾನದ ರಸ್ತೆ ನಿರ್ಮಾಣ ಕಾರ್ಯ ಈಗ ಸಾಕಾರಗೊಳ್ಳುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಶಾಸಕ ಕೆ.ವೆಂಕಟೇಶ್ ಅವರ ಕಾಳಜಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಸಹಕಾರ ಪ್ರಮುಖವಾಗಿದೆ, ಕೆ. ವೆಂಕಟೇಶ್ ಅವರು ಅಧಿಕಾರಕ್ಕಿಂತ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಜನಪರ ರಾಜಕಾರಣಿ. ಅವರ ಪ್ರಯತ್ನದಿಂದ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.


ಬರ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಬರ ಘೋಷಣೆ ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದಲ್ಲಿ ನಡೆಯುತ್ತದೆ. ಮಳೆ ಕೊರತೆ, ಮಣ್ಣಿನ ತೇವಾಂಶ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ. ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬಳಿಕ ಮಾತನಾಡಿದ ಶಾಸಕ ಕೆ.ವೆಂಕಟೇಶ್, ಹಲವು ವರ್ಷಗಳಿಂದ ಜನರ ಬೇಡಿಕೆಯಾಗಿದ್ದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ರಸ್ತೆ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಸಹಕಾರದಿಂದ ?50 ಕೋಟಿ ಅನುದಾನ ದೊರೆತಿದೆ, ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರು ಸದಾ ಬೆಂಬಲ ನೀಡಿದ್ದಾರೆ. ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ?300 ಕೋಟಿ ಅನುದಾನ ದೊರೆತಿದ್ದು, ಕಾಮಗಾರಿಯಲ್ಲಿನ ಲೋಪಗಳನ್ನು ಸರಿಪಡಿಸಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಕುಸುಮ್ ಯೋಜನೆಯಡಿ ಸೌರ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗಿದ್ದು, 70 ರಿಂದ 80 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಪಾಲಿಟೆಕ್ನಿಕ್, ಐಟಿಐ ಕಾಲೇಜುಗಳ ಸ್ಥಾಪನೆ ಹಾಗೂ ಸರ್ಕಾರಿ ಶಾಲೆಗಳಲ್ಲಿ 85 ಸ್ಮಾರ್ಟ್ ಕ್ಲಾಸ್‍ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.


ಇದೆ ವೇಳೆ ಗ್ರಾಮಸ್ಥರು ಬೆಟ್ಟದ ಮೇಲೆ ಪ್ರತಿಷ್ಠಾಪಿಸಿರುವ ಗವಿಸಿದ್ದೇಶ್ವರ ದೇವಾಲಯದ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಾಡಿಸಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಎಚ್. ಡಿ. ಗಣೇಶ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ವಿಧಾನ ಪರಿಷತ್ ಸದಸ್ಯರು ಶಿವಕುಮಾರ್, ಡಾ. ವಿಜಯಕುಮಾರ್, ಲಕ್ಷ್ಮಣ್ ರಾಜಣ್ಣ, ಡಿ.ಟಿ ಸ್ವಾಮಿ, ರಹಮದ್ ಜಾನ್ ಬಾಬು, ಅನಿತಾ, ನಿರುಪರಾಜೇಶ್, ಸರಸ್ವತಿ, ಕಾವೇರಿ ಶಂಕರ್, ಮಹಾದೇವ್, ಈ. ಪಿ.ಲೋಕೇಶ್, ಹೊಲದಪ್ಪ, ಬಸವರಾಜು, ಪಿಡಬ್ಲ್ಯೂಡಿ ಎಇಇ ಯೋಗಾನಂದ, ದಿನೇಶ್, ತಹಶೀಲ್ದಾರ್ ನಿಸರ್ಗಪ್ರಿಯ, ಇಒ ಸುನಿಲ್ ಸೇರಿದಂತೆ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.