
ಸಂಬಂಧಗಳ ಹೊಸ ಆಯಾಮಗಳು, ಪ್ರೀತಿ–ಬೇರ್ಪಡುವಿಕೆಯ ನಡುವಿನ ಭಾವನೆಗಳು ಹಾಗೂ ಇಂದಿನ ಯುವಜನತೆಯ ಜೀವನಶೈಲಿಯನ್ನು ಆಧರಿಸಿ ರೂಪುಗೊಳ್ಳುತ್ತಿರುವ ‘ಪಾರ್ಟ್ನರ್’ ಸಿನಿಮಾ ಇದೀಗ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಚಿತ್ರದ ‘ಅಮೋರಾ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ‘ಲವಲವಿಕೆ’ ಎಂಬ ಮತ್ತೊಂದು ಮೆಲೋಡಿ ಗೀತೆ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
‘ಮಳೆ’, ‘ಧೈರ್ಯಂ’, ‘ದಿಲ್ ಪಸಂದ್’ ಚಿತ್ರಗಳ ಖ್ಯಾತಿಯ ಶಿವತೇಜಸ್ ನಿರ್ದೇಶನದ ಈ ಚಿತ್ರ ಲವ್ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ. ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ಜೋಡಿಯಾಗಿ ನಟಿಸಿದ್ದು, ಲವ್, ಬ್ರೇಕಪ್, ಲಿವಿಂಗ್ ರಿಲೇಶನ್‌ಶಿಪ್ ಸೇರಿದಂತೆ ಸಮಕಾಲೀನ ಸಂಬಂಧಗಳ ಸುತ್ತ ಕಥೆ ಸಾಗಲಿದೆ. ಮನರಂಜನೆಯೊಂದಿಗೆ ಉತ್ತಮ ಸಂದೇಶವನ್ನೂ ಚಿತ್ರ ನೀಡಲಿದೆ ಎನ್ನುವುದು ಚಿತ್ರತಂಡದ ಮಾತು.
ಕವಿರಾಜ್ ಸಾಹಿತ್ಯ ಬರೆದಿರುವ ‘ಲವಲವಿಕೆ’ ಹಾಡಿಗೆ ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಾರ್ತೀಕ್ ಹಾಗೂ ರಮ್ಯ ಅಭ್ಯಂಕರ್ ಹಾಡಿಗೆ ಧ್ವನಿಯಾಗಿದ್ದು, ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣದಲ್ಲಿ ಹಾಡು ಸುಂದರವಾಗಿ ಮೂಡಿಬಂದಿದೆ. ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಹಾಗೂ ಮಂಜುನಾಥ್ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಶಿವತೇಜಸ್ ಮಾತನಾಡಿ, ಸಿನಿಮಾ ನಿರೀಕ್ಷೆಗೂ ಮೀರಿ ಚೆನ್ನಾಗಿ ಮೂಡಿಬಂದಿದೆ. ಇದು ಚಿತ್ರದ ಎರಡನೇ ಹಾಡಾಗಿದ್ದು, ಪ್ರತಿ ಹಾಡಿಗೂ ವಿಭಿನ್ನ ಬಣ್ಣದ ವಿನ್ಯಾಸ ನೀಡಲಾಗಿದೆ. ಲಕ್ಷ್ಮಿ ಕೃಷ್ಣ ವಸ್ತ್ರವಿನ್ಯಾಸ ಮಾಡಿದ್ದಾರೆ. ಪಾಂಡಿಚೇರಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ರಂಗಾಯಣ ರಘು ಮತ್ತು ಚಿತ್ಕಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.
ನಿರ್ಮಾಪಕ ಹರೀಶ್ ದೇವಿತಂದ್ರೆ, ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರ ಇದಾಗಿದ್ದು, ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ನಟ ಅಜಯ್ ರಾವ್, ನಿರ್ದೇಶಕರು ಹೇಳಿದ ಕಥಾವಸ್ತು ತಮ್ಮ ಮನಸ್ಸಿಗೆ ಹತ್ತಿರವಾಗಿದ್ದು, ಚಿತ್ರದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಭಾವನೆಗಳನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ ಎಂದರು. ನಿರ್ದೇಶಕರೊಂದಿಗೆ 25 ವರ್ಷಗಳ ಸ್ನೇಹವಿದ್ದು, ಈ ಚಿತ್ರದಲ್ಲಿ ಕೆಲಸ ಮಾಡಿರುವುದು ವಿಶೇಷ ಅನುಭವ ಎಂದರು.
ನಾಯಕಿ ಬೃಂದಾ ಆಚಾರ್ಯ, ಚಿತ್ರತಂಡದ ನಡುವಿನ ಉತ್ತಮ ಬಾಂಧವ್ಯವೇ ಚಿತ್ರೀಕರಣದ ವಿಶೇಷವಾಗಿತ್ತು. ಅಜಯ್ ರಾವ್ ಅವರೊಂದಿಗೆ ಕೆಲಸ ಮಾಡಿದ್ದು ಉತ್ತಮ ಅನುಭವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್.ಪಿ.ಆರ್. ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಹರೀಶ್ ದೇವಿತಂದ್ರೆ ನಿರ್ಮಿಸಿರುವ ಈ ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ.























