
ಮತ್ತೆ ಒಂದಾದ ‘ಪೊಗರು’ ಜೋಡಿ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಹಾಗೂ ತಂಡವನ್ನು ಚಿತ್ರತಂಡ ಘೋಷಿಸಿದೆ. ‘ಪೊಗರು’ ಚಿತ್ರದ ಬಳಿಕ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಸುಧೀರ್ (ಹಿಂದಿನ ಹೆಸರು ನಂದಕಿಶೋರ್) ಮತ್ತೊಮ್ಮೆ ಒಂದಾಗಿದ್ದು, ಚಿತ್ರಕ್ಕೆ ‘ವಸುದೈವ ಕುಟುಂಬಕಂ’ ಎಂದು ಹೆಸರಿಡಲಾಗಿದೆ.
ಮೈರಾ ಕ್ರಿಯೇಷನ್ಸ್ ಲಾಂಛನದಲ್ಲಿ ಹರೀಶ್ ಪೆದ್ದಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಿ.ಎಸ್. ಸುಧೀಂದ್ರ ಸಹ ನಿರ್ಮಾಪಕರಾಗಿದ್ದಾರೆ. ನಂದ ಸುಧೀರ್ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.
‘ವಸುದೈವ ಕುಟುಂಬಕಂ’ ಹೆಸರೇ ಸೂಚಿಸುವಂತೆ ಕೌಟುಂಬಿಕ ಕಥಾಹಂದರದ ಸಿನಿಮಾ. ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ರೀತಿಯಲ್ಲಿ ಕಥೆ ರೂಪುಗೊಂಡಿದ್ದು, ಪ್ರೀತಿ, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಮನರಂಜನೆಯ ಹಲವು ಅಂಶಗಳು ಚಿತ್ರದಲ್ಲಿರಲಿವೆ. ಧ್ರುವ ಸರ್ಜಾ ಅವರ ಸಿನಿಮಾಗಳ ಹಾಡುಗಳಿಗೆ ಸದಾ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಈ ಚಿತ್ರಕ್ಕೂ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ.
ಸತ್ಯ ಹೆಗ್ಡೆ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೆಸರಾಂತ ಹಾಗೂ ಅನುಭವಿ ಕಲಾವಿದರ ಬಹುದೊಡ್ಡ ತಾರಾಬಳಗ ಚಿತ್ರದಲ್ಲಿರಲಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದೆ.























