
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು.1- ರಸ್ತೆಯಲ್ಲಿ ಎಲ್ಲಂದರಲ್ಲಿ ಗಿಡ ಮರಗಳನ್ನು ಕಡಿದು ಹಾಗೇ ಬಿಟ್ಟು ಹೋಗುತ್ತಿದ್ದ ಜೆಸ್ಕಾಂ ವಿರುದ್ದ ಪಾಲಿಕೆ ಗರಂ ಆಗಿ ಇಂದು ಕಡಿದ ಗಿಡಗಳನ್ನು ಪಾಲಿಕೆ ಸಿಬ್ಬಂದಿ ತಂದು ಜೆಸ್ಕಾಂ ಕಚೇರಿ ಗೇಟಿನಮುಂದೆ ಸುರಿದು ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ವಿದ್ಯುತ್ ಟ್ರಾನ್ಸ್ ಫಾರಂ, ಕಂಬ, ಲೈನುಗಳಿಗೆ ತಾಗಿಕೊಂಡು ಬೆಳೆದ ಗಿಡ, ಮರ,ಬಳ್ಳಿಗಳನ್ನು ಮಳೆಗಾಲದ ಹಿನ್ನಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಅವನ್ನು ಕಡಿಯಲು ಮುಂದಾಗಿದೆ.
ಇದು ಸರಿಯಾದ ಕ್ರಮ ಆದರೂ, ಜೆಸ್ಕಾಂ ಮರಗಳನ್ನು ಕಡಿಯಲು ಗುತ್ತಿಗೆದಾರರಿಗೆ ನೀಡುತ್ತದೆ. ಅವರು ಕಡಿದ ಮರಗಳ ಕೊಂಬೆ ರೆಂಬೆಗಳನ್ನು ಹಾಗೇ ರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಇದರಿಂದ ಕಸದ ರಾಶಿ ರಸ್ತೆಗಳಲ್ಲಿ ಹೆಚ್ಚಿ ಸಾರ್ವಜನಿಕರ ಕೋಪಕ್ಕೆ ಪಾಲಿಕೆ ತುತ್ತಾಗುತ್ತಿತ್ತು.
ಇದಕ್ಕೆ ಬೇಸತ್ತ ಪಾಲಿಕೆ ಸಿಬ್ಬಂದಿ ಕಡಿದ ಮರ ಗಿಡಗಳ ರೆಂಬೆ ಕೊಂಬೆಗಳನ್ನು ತಂದು ಜೆಸ್ಕಾಂ ಕಚೇರಿಯ ಗೇಟಿನ ಮುಂದೆ ಸುರಿಯಿತು.
ನಂತರ ಕೆಇಬಿಯವರೇ ಅವನ್ನು ಬೇರೆಡೆ ಸಾಗಿಸಿ ಜನರ ಓಡಾಟಕ್ಕೆ ಅನುವು ಮಾಡಿಕೊಟ್ಟರು.
ಈ ಬಗ್ಗೆ ಪ್ರಶ್ನಿಸಿದರೆ ಮೇಯರ್ ಗಾದೆಪ್ಪ ಸಂಜೆವಾಣಿ ಜೊತೆ ಮಾತನಾಡಿ. ಜೆಸ್ಕಾಂ ನವರು ಗಿಡಗಳನ್ನು ಕಡಿದರೆ ಅವನ್ನು ತೆಗೆಯುವ ಜವಾಬ್ದಾರಿ ನಮ್ಮದು. ಆದರೆ ಅವರು ಯಾವಾಗ ಎಲ್ಲಿ ಕಡಿಯುತ್ತಾರೆಂದು ಹೇಳಿದರೆ ಅವರೊಂದಿಗೆ ನಮ್ಮ ವಾಹನವೂ ಹೋಗಲಿದೆ. ಕಡಿದು ಅದರಲ್ಲಿ ಹಾಕಿದರೆ ಜನರಿಗೆ ಆಗುವ ತೊಂದರೆ ನಿವಾರಣೆ ಆಗಲಿದೆ. ಈ ಬಗ್ಗೆ ಜೆಸ್ಕಾಂ ಇಂಜಿನೀಯರ್ ಗಳಿಗೆ ಸಾಕಷ್ಟು ಬಾರಿ ಹೇಳಿದರೂ ನಮ್ಮ ಮನವಿಗೆ ಸ್ಪಂದಿಸದ ಕಾರಣ ಈ ರೀತಿ ಮಾಡಿದೆಂದರು.




























