
ಗ್ರಾಮೀಣ ಬದುಕು, ಪಡಿತರ ವ್ಯವಸ್ಥೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಕಥೆಯ ಕೇಂದ್ರಬಿಂದುವಾಗಿಸಿಕೊಂಡಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಜುಲೈ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಿಡುಗಡೆಗೆ ಸಜ್ಜಾಗಿರುವ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಸಾಮಾಜಿಕ ಕಾಳಜಿ ಹೊಂದಿರುವ ಕಥಾವಸ್ತು ಮತ್ತು ಗ್ರಾಮೀಣ ಸೊಗಡಿನ ನಿರೂಪಣೆಯ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಚಿತ್ರದ ಟ್ರೇಲರ್ ಅನ್ನು ಹಿರಿಯ ರಾಜಕಾರಣಿ ಎಲ್.ಆರ್. ಶಿವರಾಮೇಗೌಡ, ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಗಾಯಕಿ ಶಮಿತಾ ಮಲ್ನಾಡ್ ಸೇರಿದಂತೆ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಬಿಡುಗಡೆಗೊಳಿಸಿದರು.
ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ, ಕಥೆ ಸರ್ಕಾರಿ ನ್ಯಾಯಬೆಲೆ ಅಂಗಡಿ ಹಾಗೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಸುತ್ತ ಹೆಣೆದಿದೆ. ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನು ಒಳಗೊಂಡಿರುವ ಈ ಸಿನಿಮಾವನ್ನು ಸಂಪೂರ್ಣವಾಗಿ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಬಡವರ ಆಹಾರ ಭದ್ರತೆಗಾಗಿ ಸರ್ಕಾರಗಳು ರೂಪಿಸಿರುವ ಪಡಿತರ ವ್ಯವಸ್ಥೆ ಜನರಿಗೆ ತಲುಪುವಲ್ಲಿ ಕೆಲವು ಲೋಪಗಳಿರುವುದನ್ನು ಚಿತ್ರದಲ್ಲಿ ಪ್ರಸ್ತಾಪಿಸಿರುವುದು ಶ್ಲಾಘನೀಯ ಪ್ರಯತ್ನ ಎಂದರು. ಸಾಮಾಜಿಕ ಜಾಗೃತಿ ಮೂಡಿಸುವ ವಿಷಯಗಳನ್ನು ಸಿನಿಮಾ ಮಾಧ್ಯಮದ ಮೂಲಕ ಹೇಳಿದಾಗ ಅದರ ಪರಿಣಾಮ ಇನ್ನಷ್ಟು ವ್ಯಾಪಕವಾಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ನಾಯಕ ನಟ ಕುಮಾರ ಬಂಗಾರಪ್ಪ ಮಾತನಾಡಿ, ಸರ್ಕಾರಿ ನ್ಯಾಯಬೆಲೆ ಅಂಗಡಿ ಮತ್ತು ಪಡಿತರ ವ್ಯವಸ್ಥೆಯನ್ನು ಕೇಂದ್ರವಾಗಿಟ್ಟುಕೊಂಡು ಮೂಡಿ ಬಂದಿರುವ ದೇಶದ ಮೊದಲ ಸಿನಿಮಾ ಇದಾಗಿದೆ ಎಂದು ಹೇಳಿದರು. ಗ್ರಾಮೀಣ ಹಿನ್ನೆಲೆಯಲ್ಲಿರುವ ಕಥೆಯಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಅಗತ್ಯವಾದ ಸಂದೇಶವೂ ಅಡಗಿದೆ. ವ್ಯವಸ್ಥೆಯಲ್ಲಿರುವ ವ್ಯವಹಾರಗಳು ಮತ್ತು ಅವ್ಯವಹಾರಗಳನ್ನೂ ಚಿತ್ರ ತೆರೆದಿಡಲಿದ್ದು, ಎಲ್ಲ ವರ್ಗದ ಪ್ರೇಕ್ಷಕರಿಗೂ ತಲುಪುವ ವಿಶ್ವಾಸವಿದೆ ಎಂದರು.
ಚಿತ್ರದಲ್ಲಿ ಪಾರ್ವತಿ ಎಂಬ ಹಳ್ಳಿ ಮಹಿಳೆಯ ಪಾತ್ರದಲ್ಲಿ ನಟಿಸಿರುವ ರಾಗಿಣಿ ದ್ವಿವೇದಿ, ಮೊದಲ ಬಾರಿಗೆ ಸಂಪೂರ್ಣ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಅಭಿನಯಿಸಿರುವ ಸಂತಸ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆಯ ನೈಜ ಪರಿಸರದಲ್ಲಿ ನಡೆದ ಚಿತ್ರೀಕರಣ ವಿಭಿನ್ನ ಅನುಭವ ನೀಡಿದ್ದು, ಮನರಂಜನೆಯೊಂದಿಗೆ ಉತ್ತಮ ಸಂದೇಶವನ್ನು ಈ ಸಿನಿಮಾ ನೀಡಲಿದೆ ಎಂದು ಹೇಳಿದರು.
‘ಜಯಶಂಕರ ಟಾಕೀಸ್’ ಬ್ಯಾನರ್‌ನಲ್ಲಿ ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ಚಿತ್ರ ನಿರ್ಮಿಸಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಜೊತೆಗೆ ಛಾಯಾಗ್ರಹಣವೂ ನಿರ್ವಹಿಸಿದ್ದಾರೆ. ಅನಂತ್ ಆರ್ಯನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಚಿತ್ರದಲ್ಲಿ ರಾಗಿಣಿ ದ್ವಿವೇದಿ, ಕುಮಾರ ಬಂಗಾರಪ್ಪ, ದೊಡ್ಡಣ್ಣ, ನವೀನ್ ಸಜ್ಜು, ಕೃಷ್ಣಪ್ಪ, ರುದ್ರೇಗೌಡ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸುಮಾರು 52 ದಿನಗಳ ಕಾಲ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಳಿಸಿ ಜುಲೈ 31ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ.






























