Home ಜಿಲ್ಲೆ ಮಂಗಳೂರು ಗ್ರಾಮೀಣ ಮಹಿಳೆಯ ಯಶಸ್ವಿ ಸಾಧನೆ ಬದುಕಿಗೆ ‘ಬಣ್ಣ’ ತುಂಬಿದ ಹಾಳೆತಟ್ಟೆ ಉದ್ಯಮ

ಗ್ರಾಮೀಣ ಮಹಿಳೆಯ ಯಶಸ್ವಿ ಸಾಧನೆ ಬದುಕಿಗೆ ‘ಬಣ್ಣ’ ತುಂಬಿದ ಹಾಳೆತಟ್ಟೆ ಉದ್ಯಮ

ಪುತ್ತೂರು; ಆರ್ಥಿಕ ಸಬಲತೆ ದೃಷ್ಟಿಯಿಂದ ಇಂದು ಗ್ರಾಮೀಣ ಭಾಗದಲ್ಲಿ ಮಹಿಳಾ ಉದ್ಯಮಗಳು ಬೆಳೆಯುತ್ತಿವೆ. ಹಿಂದೆ ಪುರುಷಮಯ ಆಗಿದ್ದ ಬಹುತೇಕ ಉದ್ಯಮಗಳನ್ನು ಈಗ ಮಹಿಳೆಯರು ನಡೆಸಲು ಆರಂಭಿಸಿದ್ದಾರೆ. ಕೋಳಿ ಸಾಕಾಣೆಯಿಂದ ಹಿಡಿದು ದೊಡ್ಡ ಉದ್ಯಮಗಳ ಸಾರಥ್ಯವನ್ನೂ ಮಹಿಳೆಯರು ವಹಿಸುತ್ತಿದ್ದಾರೆ. ಕುಟುಂಬ ರಕ್ಷಣೆಯ ಜತೆಗೆ ಉದ್ಯಮಗಳನ್ನೂ ಬೆಳೆಸುವ ಸ್ಥೈರ್ಯ ತೋರುವ ಗಾಮೀಣ ಭಾಗದ ಮಹಿಳೆಯರು ತಮ್ಮ ಬದುಕನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದಲ್ಲಿ ಮಹಿಳೆಯೊಬ್ಬರು ಹಾಳೆತಟ್ಟೆ ತಯಾರಿಸುವ ಉದ್ಯಮದ ಮೂಲಕ ಆರ್ಥಿಕ ಸಬಲೀಕರಣಕ್ಕೆ ಅರ್ಥಕಂಡುಕೊಂಡಿದ್ದಾರೆ. ಪ್ರಧಾನಮಂತ್ರಿ ಉದ್ಯೋಗಸೃಷ್ಟಿ ಹಾಗೂ ಸಂಜೀವಿನಿ ಒಕ್ಕೂಟದ ಮೂಲಕ ಸಾಲ ಪಡೆದುಕೊಂಡು ಪರಿಸರಸ್ನೇಹಿ ಹಾಳೆ ತಟ್ಟೆಗಳ ತಯಾರಿ ಘಟಕದ ಮೂಲಕ ಬದುಕುಕಟ್ಟಿಕೊಂಡ ಮೇಗಿನಪಂಜದ ಕುಸುಮಾವತಿ ಅವರು ಇಂದು ಓರ್ವ ಯಶಸ್ವಿ ಉದ್ಯಮಿಯಾಗಿದ್ದಾರೆ. ತಿಂಗಳಿಗೆ ಸುಮಾರು ೩ ಲಕ್ಷದಷ್ಟು ವ್ಯಾಪಾರ ವಹಿವಾಟು ನಡೆಸುತ್ತಾ ಸಂಜೀವಿನಿ ಒಕ್ಕೂಟದ ೭ ಮಹಿಳೆಯರಿಗೆ ಉದ್ಯೋಗ ನೀಡಿ ಅವರ ಬದುಕಿನಲ್ಲಿಯೂ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಇವರ ‘ಅಮ್ಮ ಹಾಳೆತಟ್ಟೆ ಘಟಕದಲ್ಲಿ ತಿಂಗಳಿಗೆ ಒಂದೂವರೆಯಿಂದ ೨ ಲಕ್ಷ ಹಾಳೆತಟ್ಟೆಗಳು ತಯಾರಾಗುತ್ತಿವೆ. ೧೨ಕ್ಕೂ ಅಧಿಕ ವಿನ್ಯಾಸದ ಹಾಳೆತಟ್ಟೆಗಳನ್ನು ತಯಾರಿಸಿ ಮಾರುಕಟ್ಟೆಗೆ ನೀಡುತ್ತಿದ್ದಾರೆ. ದಕ ಮತ್ತು ಉಡುಪಿ ಜಿಲ್ಲೆಗಳಿಗೆ ವಾರಕ್ಕೆ ಮೂರು ಬಾರಿ ಹಾಳೆತಟ್ಟೆಗಳನ್ನು ಸರಬರಾಜು ಮಾಡುತ್ತಿರುವ ಕುಸುಮಾವತಿ ಅವರು ದೇಶದ ವಿವಿಧ ಕಡೆಗಳಿಗೆ ತಮ್ಮ ಹಾಳೆತಟ್ಟೆಗಳನ್ನು ಮುಟ್ಟಿಸುವ ಕೆಲಸವನ್ನೂ ಮಾಡಿದ್ದಾರೆ. ಈ ಉದ್ಯಮಕ್ಕೆ ಪತಿ ತಾರಾನಾಥ್ ಬೆಂಗಾವಲಾಗಿ ನಿಂತಿದ್ದಾರೆ.


ಕನಸಿಗೆ ಜೀವ ಕೊಟ್ಟ ಸಂಜೀವಿನಿ
ನರ್ಸಿಂಗ್ ಕಲಿತ ಕುಸುಮಾವತಿಗೆ ತಾನೊಂದು ಸ್ವಂತ ಉದ್ಯಮ ಮಾಡಬೇಕು ಎಂಬ ಕನಸಿತ್ತು. ಈ ಹಿನ್ನಲೆಯಲ್ಲಿ ಹಾಳೆತಟ್ಟೆ ತಯಾರಿಕಾ ಘಟಕ ನಿರ್ಮಿಸುವ ಚಿಂತನೆ ನಡೆಸಿದ್ದರು. ಆರ್ಯಾಪು ಗ್ರಾಪಂ ಸದಸ್ಯೆಯಾಗಿದ್ದ ಅವರು ಗ್ರಾಮಪಂಚಾಯತ್ ನ ಅಕ್ಷಯ ಸಂಜೀವಿನಿ ಒಕ್ಕೂಟದಿಂದ ಮೊದಲ ಬಾರಿಗೆ ೭೫ ಸಾವಿರ ಸಾಲಪಡೆದರು. ಇದು ಮಾನವಶ್ರಮದ ಮೂಲಕ ಹಾಳೆತಟ್ಟೆ ತಯಾರಿಕಾ ಘಟಕಕ್ಕೆ ದಾರಿಯಾಯಿತು. ಕುಸುಮಾವತಿ ಅವರ ಕನಸಿಗೆ ಸಂಜೀವಿನಿ ಒಕ್ಕೂಟ ಜೀವ ತುಂಬುವ ಕೆಲಸ ಮಾಡಿತು. ಹಾಳೆತಟ್ಟೆಗಳಿಗೆ ಉತ್ತಮ ಬೇಡಿಕೆಯನ್ನು ಕಂಡುಕೊಂಡ ಅವರು ಘಟಕವನ್ನು ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಿದರು. ಅದಕ್ಕಾಗಿ ಪ್ರಧಾನಮಂತ್ರಿ ಉದ್ಯೋಗಸೃಷ್ಟಿ ಕಾರ್ಯಕ್ರಮದಡಿಯಲ್ಲಿ ಬ್ಯಾಂಕ್ ಮೂಲಕ ೩ ಲಕ್ಷ ಸಬ್ಸಿಡಿಯ ೧೦ ಲಕ್ಷ ಸಾಲಪಡೆದರು. ಘಟಕದ ಚಿತ್ರಣವೇ ಬದಲಾಯಿತು. ವಿದ್ಯುತ್ ಶಕ್ತಿ ಚಾಲಿತ ಯಂತ್ರಗಳ ಮೂಲಕ ಹಾಳೆತಟ್ಟೆ ತಯಾರಿ ಆರಂಭಗೊಂಡಿತು. ಪ್ರಸ್ತುತ ೧೪ ವಿದ್ಯುತ್ ಚಾಲಿತ ಯಂತ್ರಗಳು ಘಟಕದಲ್ಲಿವೆ. ಇದರಿಂದ ದಿನಕ್ಕೆ ೫ ಸಾವಿರ ಹಾಳೆತಟ್ಟೆಗಳು ತಯಾರಾಗುತ್ತಿವೆ. ಅದಕ್ಕೆ ಬೇಕಾದ ಕಚ್ಚಾ ಹಾಳೆಗಳನ್ನು ಸ್ಥಳೀಯ ರೈತರಿಂದ ಖರೀದಿ ಮಾಡುತ್ತಾರೆ. ಇಲ್ಲಿ ತಯಾರಿಸಲಾಗುವ ಸಣ್ಣ ತಟ್ಟೆಗೆ ೧ ರೂ ಹಾಗೂ ದೊಡ್ಡ ತಟ್ಟೆಗೆ ರೂ.೫ ಮಾರುಕಟ್ಟೆ ದರ ನಿಗಧಿಪಡಿಸಿದ್ದಾರೆ. ಪ್ರಸ್ತುತ ಘಟಕದ ವ್ಯವಸ್ಥೆ ಹಾಗೂ ಉದ್ಯೋಗಿಗಳಿಗೆ ಸಂಬಳ ಇತ್ಯಾದಿಗಳಿಗಾಗಿ ೨ ಲಕ್ಷ ವೆಚ್ಚ ತಗಲುತ್ತದೆ. ತಿಂಗಳಿಗೆ ಕನಿಷ್ಟ ೧ ಲಕ್ಷ ಉಳಿತಾಯ ಮಾಡುತ್ತಿರುವ ಕುಸುಮಾವತಿ ಅವರಿಗೆ ಸಾಕಷ್ಟು ತೃಪ್ತಿ ಇದೆ. ಇದರ ಜತೆಗೆ ಘಟಕವನ್ನು ಮತ್ತಷ್ಟು ದೊಡ್ಡದಾಗಿಸುವ ಕನಸೂ ಇದೆ.
ಜೀವನ ನಿರ್ವಹಣೆಗೆ ಸಹಕಾರಿ
ಹಾಳೆತಟ್ಟೆ ತಯಾರಿಕಾ ಘಟಕ ನಿರ್ಮಾಣದ ಜತೆಗೆ ಕುಸುಮಾವತಿ ಅವರು ತನ್ನೊಂದಿಗೆ ಸಂಜೀವಿನಿ ಒಕ್ಕೂಟದಲ್ಲಿದ್ದ ೭ ಮಂದಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಅವರಲ್ಲಿ ಒಬ್ಬರು ಆರ್ಯಾಪು ಗ್ರಾಪಂನ ಮಾಜಿ ಅಧ್ಯಕ್ಷೆ ಸರಸ್ವತಿ. ಹಿಂದೆ ಕ್ಯಾಂಪ್ಕೊ ಕಂಪೆನಿಗೆ ಕೆಲಸಕ್ಕೆ ಹೋಗುತ್ತಿದ್ದೆ. ನಂತರ ಅದನ್ನು ನಿಲ್ಲಿಸಿದೆ. ಕುಟುಂಬ ರಕ್ಷಣೆಗೆ ಸಂಕಷ್ಟ ಉಂಟಾಗಿತು. ಏನೂ ಇಲ್ಲದ ಸಮಯದಲ್ಲಿ ಈ ಅಮ್ಮ ಹಾಳೆತಟ್ಟೆ ತಯಾರಿಕಾ ಘಟಕ ನಮ್ಮ ಕುಟುಂಬದ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸ್ವಂತ ಉದ್ದಿಮೆಗೆ ನೆರವು
ಸ್ವಂತ ಉದ್ಯಮದ ಕನಸು ಹೊಂದಿದ್ದ ಸಂಜೀವಿನಿ ಒಕ್ಕೂಟದ ಕುಸುಮಾವತಿ ಅವರು ತಮ್ಮ ಕನಸನ್ನು ನನಸು ಮಾಡಿದ್ದಾರೆ. ಇತರ ಮಹಿಳೆಯರಿಗೂ ಉದ್ಯೋಗ ನೀಡಿದ್ದಾರೆ. ಅವರ ಕನಸಿನ ಬೀಜ ಮೊಳೆಯಲು ಮೊದಲು ಸಂಜೀವಿನಿ ಒಕ್ಕೂಟದಿಂದ ಸಾಲ ನೀಡಲಾಗಿದೆ. ಸರ್ಕಾರದ ಹಲವು ಯೋಜನೆಗಳ ಮೂಲಕವೂ ಸಾಲ ಒದಗಿಸಲಾಗಿದೆ. ಘಟಕವನ್ನು ಮತ್ತಷ್ಟು ದೊಡ್ಡದಾಗಿಸುವ ಅವರ ಕನಸಿಗೆ ಬೇಕಾದ ಸಾಲದ ವ್ಯವಸ್ಥೆಗೆ ಸರ್ಕಾರದ ಯೋಜನೆಗಳ ಮೂಲಕ ನೆರವು ನೀಡಲಾಗುವುದು– ನಮಿತಾ ಪುತ್ತೂರು. ವಲಯ ಮೇಲ್ವಿಚಾರಕಿ.

ಮೇಘಾ ಪಾಲೆತ್ತಾಡಿ