
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.29: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಹೆಚ್.ಮುನಿಯಪ್ಪ ಅವರಿಗೆ ಉಪ ಮುಖ್ಯ ಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ಬಳ್ಳಾರಿ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘ ಒತ್ತಾಯಿಸಿದೆ.
ನಗರದಲ್ಲಿ ಸಂಘದ ಕಚೇರಿಯಲ್ಲಿ ಇಂದು ಸಂಘದ ಗೌರವ ಅಧ್ಯಕ್ಷ ಎಲ್.ಮಾರೆಣ್ಣ, ಪ್ರಧಾನ ಕಾರ್ಯದರ್ಶಿ ಎರುಕುಲಸ್ವಾಮಿ ಇವರು ಸುದ್ದಿಗೋಷ್ಟಿ ನಡೆಸಿ
ದಲಿತರಿಗೆ ಇದುವರೆಗೆ ಸಿಎಂ ಸ್ಥಾನ ಲಭಿಸಿಲ್ಲ. ಕನಿಷ್ಠ ಡಿಸಿಎಂ ಸ್ಥಾನವಾದರೂ ಸಿಗಲಿ, ಪಕ್ಷ ನಿಷ್ಠೆ, ಪಕ್ಷವನ್ನು ಸತತವಾಗಿ ಕೈಹಿಡಿದ ಸಮುದಾಯದ ನಿಷ್ಕಳಂಕ ನಾಯಕ ಮುನಿಯಪ್ಪರವರು. ರಾಷ್ಟ್ರ ಮಟ್ಟದಲ್ಲಿ ರಾಜಕೀಯ ನಾಯಕರಾದವರು.ಮಾದಿಗ ಸಮುದಾಯಕ್ಕೆ ಒಳ ಮೀಸಲಾ ಕೊಡಿಸುವಲ್ಲಿ ಶ್ರಮಿಸಿ ಯಶಸು ಸಾಧಿಸಿದವರು.
ಪ್ರಸ್ತುತ ಮೂರು ವರ್ಷಗಳನ್ನು ಪೂರೈಸಿರುವ ರಾಜ್ಯ ಸರ್ಕಾರಕ್ಕೆ ಉಳಿದಿರುವ ಅವಧಿಯಲ್ಲಿ 2028ರ ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗಬೇಕಿರುವ ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಹೊಸ ಸರ್ಕಾರದಲ್ಲಿ ಸತತವಾಗಿ ಪಕ್ಷವನ್ನು ಕೈಹಿಡಿದಿರುವ ಸಮುದಾಯಕ್ಕೆ ಆದ್ಯತೆ ನೀಡುವುದು ಪಕ್ಷದ ರಣ ನೀತಿಗಳಲ್ಲಿ ಒಂದಾಗಬೇಕಿದೆ. ಸಮುದಾಯದ ಜತೆಗೆ ಪಕ್ಷ ನಿಷ್ಠೆ ಮತ್ತು ನಿಷ್ಕಂಳಕಿತ ನಾಯಕನಿಗೆ ಉನ್ನತ ಸ್ಥಾನಮಾನ ನೀಡುವ, ಪಕ್ಷವನ್ನು ಬಲಿಷ್ಠಗೊಳಿಸುವ ಜವಾಬ್ದಾರಿ ಸಹ ಹೈಕಮಾಂಡ್ ಮೇಲಿದೆ. ಈ ನಿಟ್ಟಿನಲ್ಲಿ ಮುಂದಿನ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಾಗ ಮುನಿಯಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದರು.
ಸಂಘದ ಸಹ ಕಾರ್ಯದರ್ಶಿ ಎಸ್.ಪ್ರಸಾದ್ ಮೊದಲಾದವರು ಸುದ್ದಿಗೋಷ್ಟಿಯಲ್ಲಿದ್ದರು.























