
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.15: ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುವ ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೂಡಲೇ ತರಗತಿಗಳನ್ನು ಪ್ರಾರಂಭ ಮಾಡಬೇಕು. ಮಾಡದೇ ಇರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಸಿದ್ದೇಶ್ ಊಳೂರು ಮೊದಲಾದವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಕಳೆದ ಮೇ.29 ರಿಂದಲೇ ಈ ವಸತಿ ಶಾಲೆ ಮತ್ತು ತರಗತಿಗಳು ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಪ್ರಾರಂಭವಾಗಬೇಕಿತ್ತು. ಆದರೆ ಇಲ್ಲಿಯವರೆಗೆ 17 ದಿನ ಕಳೆದರೂ ಸಹ ಸಮಾಜ ಕಲ್ಯಾಣ ಅಧಿಕಾರಿಗಳು, ವಸತಿ ಶಾಲೆ ತರಗತಿಗಳನ್ನು ಪ್ರಾರಂಭ ಮಾಡದೇ ಇರುವುದು ಸೂಚನೆಯ ಸಂಗತಿಯಾಗಿದೆ.
ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಸರ್ಕಾರವು ವಸತಿ ಶಾಲೆಯನ್ನು ಪ್ರಾರಂಭಿಸಿದೆ. ಬಳ್ಳಾರಿ ಜಿಲ್ಲೆಯ ಸುತ್ತಮುತ್ತ ಜಿಲ್ಲೆಗಳಾದ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಸತಿ ಶಾಲೆ ಮತ್ತು ತರಗತಿಗಳು ಪ್ರಾರಂಭವಾಗಿದ್ದು, ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಆಧ್ಯತೆಯನ್ನು ನೀಡಿರುತ್ತಾರೆ. ಆದರೆ ನಮ್ಮ ಬಳ್ಳಾರಿ ನಗರದಲ್ಲಿ ಪ್ರಾರಂಭ ಮಾಡಿಲ್ಲ.ಆದ್ದುದರಿಂದ ವಸತಿ ಶಾಲೆ ಮತ್ತು ತರಗತಿಗಳನ್ನು ಪ್ರಾರಂಭ ಮಾಡದ ಅಧಿಕಾರಿಗಳು ಸಂಪೂರ್ಣವಾಗಿ ಆರ್.ಟಿ.ಇ. ಕಾಯ್ದೆ 2009ರ ಸೆಕ್ಷನ್ 3ರ ಸ್ಪಷ್ಟ ಉಲ್ಲಂಘನೆ ಮಾಡಿರುತ್ತಾರೆ.
ವಸತಿ ಶಾಲೆ ಮತ್ತು ತರಗತಿ ಪ್ರಾರಂಬ ವಿಳಂಬಕ್ಕೆ ಕಾರಣರಾದ ಬಳ್ಳಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಬೇಕೆಂದು ಕೂಡಲೇ ಶಾಲೆ ತೆರೆಯಲು ಮನವಿ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಮಲ್ಲಪ್ಪ, ಮಹೇಶ್ ,ಕೀಶೋರ್, ತಿರುಮಲ,ಮತ್ತಿತರರು ಇದ್ದರು.
ಚೆಕ್ ಮಾಡಿ ಹೇಳುವೆ:
ಶಾಲೆ ಆರಂಭದ ಬಗ್ಗೆ ಸಂಜೆವಾಣಿ ಸಮಾಜ ಕಲ್ಯಾಣ ಅಧಿಕಾರಿ ಚಿದಾನಂದಪ್ಪ ಕುರಿ ಅವರು ಆರಂಭದಲ್ಲಿ ಶಾಲೆ ಆರಂಭವಾಗಿದೆ ಎಂದು ಸಮರ್ಥಿಸಿಕೊಂಡಿದ್ದಲ್ಲದೆ. ಮಕ್ಕಳಿದ್ದಾರೆ ಬಹಳ ಜನ ಬಂದಿಲ್ಲ ಎಂದರು. ಎಷ್ಟು ಮಕ್ಕಳಿದ್ದಾರೆಂಬ ಪ್ರಶ್ನೆಗೆ ಚೆಕ್ ಮಾಡಿ ಹೇಳುವೆ ಎನ್ನುತ್ತಾರೆ.
ನಿಯಮದ ಪ್ರಕಾರ ಶಾಲೆಯಲ್ಲಿ ಎಷ್ಟು ಮಕ್ಕಳಿದ್ದಾರೆ ಅವರ ಊಟ ಉಪಹಾರದ ಬಗ್ಗೆ ದಿನಾಲು ಜಿಪಿಎಸ್ ಪೋಟೋ ತೆಗೆದು ಇಲಾಖೆಯ ಮುಖ್ಯಸ್ಥರಿಗೆ ಕಳಿಸಲಾಗುತ್ತದೆ. ಹೀಗಿದ್ದರೂ ಚೆಕ್ ಮಾಡಿ ಹೇಳುವೆ ಎಂದರೆ ಈ ಶಾಲೆ ಬಗ್ಗೆ ಅವರಿಗಿರುವ ಕಾಳಜಿ ಏನೆಂಬುದು ಅರ್ಥವಾಗುತ್ತೆ.
ಜಿಲ್ಲಾಡಳಿತಕ್ಕೆ ದೂರು ನೀಡಿದ ಮೇಲೆ ಮಕ್ಕಳ ಪೋಷಕರಿಗೆ ಪೋನ್ ಕರೆ ಮಾಡಿ ಕರೆಯುವ ಕೆಲಸ ಆರಂಭಿಸಿದ್ದಾರಂತೆ.


























