Home ಜಿಲ್ಲೆ ಸಿಯೋಲ್ ನಲ್ಲಿ ಭಾರತ ದಿನಾಚರಣೆ ಸಂಭ್ರಮ: ಕೊರಿಯಾ ಕನ್ನಡ ಕೂಟದ ಮೆರಗು

ಸಿಯೋಲ್ ನಲ್ಲಿ ಭಾರತ ದಿನಾಚರಣೆ ಸಂಭ್ರಮ: ಕೊರಿಯಾ ಕನ್ನಡ ಕೂಟದ ಮೆರಗು

ಸಂಜೆವಾಣಿ ವಾರ್ತೆ

ಬಳ್ಳಾರಿ.ಮೇ.20-ದಕ್ಷಿಣ ಕೊರಿಯಾದ ಸಿಯೋಲ್ ನ ಯೋಯಿದೋ ಹಾಂಗಾಂಗ್ ಪಾರ್ಕ್ (Yeouido Hangang Park)  ನಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ “ಭಾರತ ದಿನಾಚರಣೆ-2026 (2026 India day)”  ಕಾರ್ಯಕ್ರಮವು ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕೃತಿಯ ಸುವಾಸನೆ ಹರಡಿಸಿದ ಸಂಭ್ರಮವಾಗಿ ಮೂಡಿಬಂದಿತು. ಬೆಳಿಗ್ಗೆಯಿಂದ ಸಂಜೆವರೆಗೆ ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದೆಲ್ಲೆಡೆಯ ಸಂಸ್ಕೃತಿ, ಪರಂಪರೆ, ಹಾಗೂ ಕಲೆಗಳ ವೈವಿಧ್ಯತೆ ಮನಮುಟ್ಟುವ ರೀತಿಯಲ್ಲಿ ಅನಾವರಣಗೊಂಡಿತು.

ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರಿ ಗೌರಂಗಲಾಲ್ ದಾಸ್ ಉದ್ಘಾಟನಾ ಮಾತುಗಳನ್ನಾಡಿ ಚಾಲನೆ ನೀಡಿದರು. ನಂತರ ದಿನವಿಡೀ ಭರತನಾಟ್ಯ, ಒಡಿಸ್ಸಿ, ಕಥಕ್ ಸೇರಿದಂತೆ ವಿವಿಧ ಶಾಸ್ತ್ರೀಯ ನೃತ್ಯಗಳು, ಯೋಗ ಪ್ರದರ್ಶನಗಳು ಮತ್ತು ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.

ವಿವಿಧ ಭಾರತೀಯ ಸಮುದಾಯದ ಸದಸ್ಯರು ಭಾಗವಹಿಸಿ ನೃತ್ಯ, ಸಂಗೀತ, ಯೋಗ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ಭಾರತೀಯ ಸಮುದಾಯದ ಜೊತೆಗೆ ಕೊರಿಯಾದ ಸ್ಥಳೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇದರಲ್ಲಿ ಕೊರಿಯಾ ಕನ್ನಡ ಕೂಟ (ಏಏಏ) ವು ಅತ್ಯಂತ ಉತ್ಸಾಹ ಮತ್ತು ಜವಾಬ್ದಾರಿ ಯಿಂದ ಭಾಗವಹಿಸಿ ತನ್ನ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಸೌತ್ ಜೋನ್ ನ ಕರ್ನಾಟಕ ಭೂತ್ ನಲ್ಲಿ ರಾಜ್ಯದ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಹಲವು ವಸ್ತುಗಳನ್ನು ಮನಮೋಹಕವಾಗಿ ಪ್ರದರ್ಶಿಸಲಾಗಿತ್ತು. ಬಸವಣ್ಣರಂತಹ ಮಹಾನ್ ಚಿಂತಕರ ಪ್ರತಿರೂಪಗಳು (3D images), , ಮೈಸೂರು ಅರಮನೆ, ಅಂಬಾರಿ, ಗೋಲ್ಗುಂಬಜ್, ಬೇಲೂರು – ಹಳೇಬೀಡು ಶಿಲ್ಪಕಲೆ, ಹಂಪಿಯ ಕಲ್ಲಿನ ರಥ ಇತ್ಯಾದಿ ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರತೀಕಗಳು ಗಮನ ಸೆಳೆದವು. ಜೊತೆಗೆ ಮೈಸೂರು ಸಿಲ್ಕ್, ಇಲ್ಕಲ್ ಸೀರೆಗಳು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪರಿಚಯವು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸಿತು. ಕುವೆಂಪು, ತೇಜಸ್ವಿ, ಶಿವರಾಮ ಕಾರಂತ್ ಮೊದಲಾದ ಮಹನೀಯರ ಕೃತಿಗಳನ್ನು ಪರಿಚಯಿಸುವ ಪುಸ್ತಕಗಳನ್ನೂ ಪ್ರದರ್ಶಿಸಲಾಗಿತ್ತು. ಆನೆಗಳ ಪ್ರತಿರೂಪಗಳು ಮಳಿಗೆಗೆ ಮತ್ತಷ್ಟು ಆಕರ್ಷಣೆಯನ್ನು ತಂದವು.

ಕೊರಿಯಾ ಕನ್ನಡ ಕೂಟ (kkk) ವತಿಯಿಂದ ರಮ್ಯಾ ಗೌಡ ನೇತೃತ್ವದಲ್ಲಿ ಮೂಡಿಬಂದ ಕರ್ನಾಟಕದ ಜನಪದ ನೃತ್ಯ ‘ಕೋಲಾಟ’ವು ಉತ್ಸಾಹಭರಿತವಾಗಿ ಪ್ರೇಕ್ಷಕರನ್ನು ರಂಜಿಸಿತು. ಅಧ್ಯಂತ್ ನರಹರಿ ಉಪಾಧ್ಯ ಅವರ ಫೂಟ್ ರೆಸೈಟಲ್ ಕಾರ್ಯಕ್ರಮಕ್ಕೆ ಶಾಂತಮಯ ಸ್ಪರ್ಶ ನೀಡಿದರೆ, ಅುಕ್ತ ಉಪಾಧ್ಯ ಅವರ ಭರತನಾಟ್ಯ ಪ್ರದರ್ಶನ ಶೈಲಿ ಮತ್ತು ಭಾವಾಭಿವ್ಯಕ್ತಿಯಿಂದ ವಿಶೇಷವಾಗಿ ಮೆಚ್ಚುಗೆಗೆ ಪಾತ್ರವಾಯಿತು.