Home ಸಿನೆಮಾ ಶ್ರೇಯಾ ಘೋಶಾಲ್ ಕಂಠದಲ್ಲಿ ‘ಬೃಂದಾವಿಹಾರಿ’ಯ ನಾದಸುನಾದ

ಶ್ರೇಯಾ ಘೋಶಾಲ್ ಕಂಠದಲ್ಲಿ ‘ಬೃಂದಾವಿಹಾರಿ’ಯ ನಾದಸುನಾದ

ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರದ ಸಂಗೀತದ ಸೊಗಡು ಮತ್ತಷ್ಟು ಹೆಚ್ಚಾಗಿದೆ. ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ಅವರ ಸುಮಧುರ ಕಂಠದಲ್ಲಿ ಮೂಡಿಬಂದಿರುವ ‘ನಾದಸುನಾದ’ ಹಾಡು ಇದೀಗ ಬಿಡುಗಡೆಯಾಗಿದ್ದು, ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾದ ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಡಾ. ವಿ. ನಾಗೇಂದ್ರಪ್ರಸಾದ್ ರಚಿಸಿರುವ ಹಾಡಿಗೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರದ ಹಲವು ಹಾಡುಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು, ‘ನಾದಸುನಾದ’ ಕೂಡ ಆ ಸಾಲಿಗೆ ಸೇರುವ ನಿರೀಕ್ಷೆ ಮೂಡಿಸಿದೆ.

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಯಶಸ್ಸಿನ ಬಳಿಕ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸರಾಜು ಮತ್ತೆ ಒಂದಾಗಿರುವುದು ‘ಬೃಂದಾವಿಹಾರಿ’ ಚಿತ್ರದ ಮೇಲಿನ ಕುತೂಹಲಕ್ಕೆ ಮತ್ತಷ್ಟು ಕಾರಣವಾಗಿದೆ. ನಿರ್ಮಾಪಕಿ ಸಮೃದ್ಧಿ ವಿ. ಮಂಜುನಾಥ್ ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದು, ಯಾವುದೇ ಕೊರತೆ ಇರದಂತೆ ಚಿತ್ರವನ್ನು ರೂಪಿಸಲಾಗಿದೆ.

ಅಕ್ಟೋಬರ್ 16ರಂದು ಚಿತ್ರ ತೆರೆಗೆ ಬರಲಿದೆ. ಗಣೇಶ್ ಅವರಿಗೆ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ನಾಯಕಿಯರಾಗಿ ನಟಿಸಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕಿದೆ. ಗಣೇಶ್ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.