Home ಸಿನೆಮಾ ಮೌನದ ನೋವಿನ ಕಥೆಗೆ ಕನ್ನಡಿ ಹಿಡಿದ ‘ಬ್ರಹ್ಮ ಕಮಲ’

ಮೌನದ ನೋವಿನ ಕಥೆಗೆ ಕನ್ನಡಿ ಹಿಡಿದ ‘ಬ್ರಹ್ಮ ಕಮಲ’

ಟ್ರೈಲರ್‌ಗೆ ಸಿನಿಪ್ರಿಯರ ಮೆಚ್ಚುಗೆ

ಕೌಟುಂಬಿಕ ಬದುಕಿನೊಳಗೆ ಅಡಗಿರುವ ಭಾವನೆಗಳನ್ನು ತೆರೆಗೆ ತರುವ ಪ್ರಯತ್ನಗಳು ಅಪರೂಪ. ಅಂತಹ ಸೂಕ್ಷ್ಮ ಕಥಾಹಂದರವನ್ನು ಆಯ್ದುಕೊಂಡಿರುವ ‘ಬ್ರಹ್ಮ ಕಮಲ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಒಂದೇ ರಾತ್ರಿಯ ಘಟನೆಗಳ ಸುತ್ತ ಸಾಗುವ ಈ ಸಿನಿಮಾ, ಮನೆಯೊಳಗಿನ ಹೆಣ್ಣಿನ ಅಂತರಂಗದ ನೋವು, ಮೌನ ಮತ್ತು ಆತ್ಮಸಂಘರ್ಷವನ್ನು ಭಾವನಾತ್ಮಕವಾಗಿ ಕಟ್ಟಿಕೊಡಲಿದೆ ಎಂಬ ಸುಳಿವನ್ನು ಟ್ರೈಲರ್ ನೀಡಿದೆ.

ಈ ಹಿಂದೆ ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಸಿದ್ದು ಪೂರ್ಣಚಂದ್ರ, ಈ ಬಾರಿ ಮತ್ತೊಂದು ವಿಭಿನ್ನ ಕಥೆಯನ್ನು ಆಯ್ದುಕೊಂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನವನ್ನೂ ಅವರೇ ನಿರ್ವಹಿಸಿದ್ದು, ಮಹಿಳೆಯ ಮನಸ್ಸಿನೊಳಗಿನ ಹೇಳಲಾಗದ ಭಾವನೆಗಳಿಗೆ ದೃಶ್ಯರೂಪ ನೀಡುವ ಪ್ರಯತ್ನ ಮಾಡಿದ್ದಾರೆ.

ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ‘ಬ್ರಹ್ಮ ಕಮಲ’ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರೋತ್ಸವದಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮೂರು ವಿಶೇಷ ಪ್ರದರ್ಶನಗಳನ್ನು ಕಂಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪೂರ್ಣಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾಹುತ್ ಹಾಗೂ ಪ್ರಮೀಳಾ ಸುಬ್ರಮಣ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪು ಸಂಕಲನ ನೀಡಿದ್ದಾರೆ. ನಾಗರತ್ನ ಕೆ.ಎಚ್ ನಿರ್ಮಾಣ ನಿರ್ವಹಣೆ ವಹಿಸಿದ್ದು, ಪುಟ್ಟರಾಜು ಹಾಗೂ ಪ್ರಮೀಳಾ ಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.