
ಅಂಬಾಜೋಗೈ,ಸೆ.2-ತನ್ನ ಮಕ್ಕಳ ಭವಿಷ್ಯಕ್ಕಾಗಿ ತಾಯಿಯೊಬ್ಬಳು ದೃಢನಿಶ್ಚಯ ಮಾಡಿದರೆ ಈ ಜಗತ್ತಿನಲ್ಲಿ ಅವಳನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ ಎಂಬುದನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನಲ್ಲಿ ನಡೆದ ಘಟನೆಯೊಂದು ಜಗತ್ತಿಗೆ ಸಾರಿ ಹೇಳಿದೆ. ಬಡತನದ ಕತ್ತಲೆ, ಸಮಾಜದ ನಿರ್ಬಂಧಗಳು ಮತ್ತು ಕಾಲ್ಬೆರಳುಗಳಲ್ಲಿದ್ದ ರಕ್ತದ ಹನಿಗಳು ಯಾವುದೂ ಅವಳ ಹೆಜ್ಜೆಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಹಿಂಗೋಲಿಯಿಂದ ಬಂದು ಅಂಬಾಜೋಗೈನ ಮೆಸ್ ಒಂದರಲ್ಲಿ ದಿನವಿಡೀ ರೊಟ್ಟಿ ತಟ್ಟುತ್ತಾ, ಪಾತ್ರೆ ತೊಳೆಯುತ್ತಾ ಬದುಕಿನ ಬಂಡಿ ಎಳೆಯುತ್ತಿದ್ದ 47 ವರ್ಷದ ರಮಾಬಾಯಿ ರಣವೀರ್ ಅವರ ಈ ಕಥೆ ಕೇವಲ ಕ್ರೀಡಾ ಸ್ಪರ್ಧೆಯ ಗೆಲುವಲ್ಲ, ಅದು ಒಬ್ಬ ತಾಯಿಯ ಪ್ರೀತಿ ಮತ್ತು ಅದಮ್ಯ ಧೈರ್ಯದ ಜೀವಂತ ಉದಾಹರಣೆಯಾಗಿದೆ. ಪತಿಯ ಅಕಾಲಿಕ ಮರಣದ ನಂತರ ಇಬ್ಬರು ಹೆಣ್ಣುಮಕ್ಕಳನ್ನು ಸಾಕಿ ಬೆಳೆಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಮಕ್ಕಳನ್ನು ಬೇಗನೇ ಮದುವೆ ಮಾಡಿ ಕಳುಹಿಸಿ ಎಂಬ ಸಮಾಜದ ಉಚಿತ ಸಲಹೆಗಳನ್ನು ಬದಿಗೊತ್ತಿ, ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲು ಅವರು ಪಣತೊಟ್ಟಿದ್ದರು. ಒಬ್ಬ ಮಗಳು ಬ್ಯಾಂಕಿಂಗ್ ಪರೀಕ್ಷೆಗೆ ಹಾಗೂ ಇನ್ನೊಬ್ಬಳು ಪೆÇಲೀಸ್ ನೇಮಕಾತಿ ಪರೀಕ್ಷೆಗೆ ಸಿದ್ಧತೆಯಲ್ಲಿದ್ದಾಗ, ಪುಸ್ತಕಗಳು ಮತ್ತು ಫಾರ್ಮ್ ಶುಲ್ಕ ತೀರಿಸಲು ಹಣವಿಲ್ಲದೆ ರಮಾಬಾಯಿ ಕಂಗಾಲಾಗಿದ್ದರು.
ಅದೇ ಸಮಯದಲ್ಲಿ ಸ್ಥಳೀಯವಾಗಿ ಆಯೋಜಿಸಲಾಗಿದ್ದ ‘ಅಮೃತ್ ದೌಡ್’ ಮ್ಯಾರಥಾನ್ನಲ್ಲಿ ಪ್ರಥಮ ಬಹುಮಾನವಾಗಿ ಮೂರು ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿದ ತಕ್ಷಣ, ರಮಾಬಾಯಿಯವರ ಕಣ್ಣಲ್ಲಿ ಹೊಸ ಭರವಸೆ ಮೂಡಿತು. ಬ್ರಾಂಡೆಡ್ ಶೂಗಳು, ಟ್ರ್ಯಾಕ್ಸೂಟ್ಗಳು ಹಾಗೂ ಇಯರ್ಫೆÇೀನ್ ಧರಿಸಿದ ಯುವ ಸ್ಪರ್ಧಿಗಳ ನಡುವೆ, ಸಾದಾ ಹತ್ತಿ ಸೀರೆಯುಟ್ಟು ಒಂದು ಮೂಲೆಯಲ್ಲಿ ನಿಂತಿದ್ದ 47 ವರ್ಷದ ರಮಾಬಾಯಿಯವರನ್ನು ನೋಡಿ ಹಲವರು ನಕ್ಕಿದ್ದರು. ಆದರೆ ಓಟದ ಶಿಳ್ಳೆ ಬೀಳುತ್ತಿದ್ದಂತೆ, ಅವರ ಓಟದ ವೇಗ ಎಲ್ಲರನ್ನೂ ಬೆರಗುಗೊಳಿಸಿತು. ಓಡುತ್ತಿರುವಾಗಲೇ ತಮ್ಮ ಚಪ್ಪಲಿಗಳು ಜಾರಲು ಪ್ರಾರಂಭಿಸಿದಾಗ, ವೃತ್ತಿಪರ ಓಟಗಾರರಾಗಿದ್ದರೆ ಓಟವನ್ನೇ ಕೈಬಿಡುತ್ತಿದ್ದರೇನೋ. ಆದರೆ ರಮಾಬಾಯಿಗೆ ನಿಲ್ಲುವುದು ಎಂದರೆ ತನ್ನ ಮಕ್ಕಳ ಶಿಕ್ಷಣದ ಕನಸನ್ನು ಕಳೆದುಕೊಂಡಂತೆ. ಕ್ಷಣವೂ ತಡಮಾಡದೆ, ಓಡುತ್ತಲೇ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಟಾರ್ ರಸ್ತೆಯ ಮೇಲೆ ಬರಿಗಾಲಿನಲ್ಲಿ ಧಾವಿಸಲು ತೊಡಗಿದರು. ಚುಚ್ಚುವ ಬೆಣಚುಕಲ್ಲುಗಳು, ಪಾದಗಳಿಂದ ಹರಿಯುವ ರಕ್ತ ಮತ್ತು ಒಂದು ಕೈಯಲ್ಲಿ ಸೀರೆಯ ಪಲ್ಲನ್ನು ಹಿಡಿದುಕೊಂಡು ಯುವ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಹಿಂದಿಕ್ಕಿ ಮೊದಲಿಗರಾಗಿ ಫಿನಿಶಿಂಗ್ ಲೈನ್ ದಾಟಿದಾಗ, ಅಲ್ಲಿದ್ದ ಪ್ರತಿಯೊಬ್ಬರ ಕಣ್ಣುಗಳು ತೇವಗೊಂಡಿದ್ದವು.
ದುಬಾರಿ ಅನುಕೂಲತೆಗಳಿಗಿಂತ ತಾಯಿಯ ಇಚ್ಛಾಶಕ್ತಿಯೇ ಶ್ರೇಷ್ಠ ಎಂಬುದನ್ನು ನಿರೂಪಿಸಿದ ರಮಾಬಾಯಿ, ಗೆದ್ದ ಆ ಮೂರು ಸಾವಿರ ರೂಪಾಯಿಗಳಿಂದ ತಮ್ಮ ಮಕ್ಕಳ ಭವಿಷ್ಯಕ್ಕೆ ಹೊಸ ಬೆಳಕು ನೀಡಿದ್ದಾರೆ. ಇಂದು ಅಂಬಾಜೋಗೈನಿಂದ ಹಿಡಿದು ಇಡೀ ಮಹಾರಾಷ್ಟ್ರವೇ ಈ ಅಪ್ರತಿಮ ತಾಯಿಯ ತ್ಯಾಗ ಮತ್ತು ಸಾಹಸಕ್ಕೆ ತಲೆಬಾಗಿ ಗೌರವಿಸುತ್ತಿದೆ.






























