Home ಜಿಲ್ಲೆ ಮಂಗಳೂರು ಪಾಣಾಜೆ ಸಮುದಾಯ ಆರೋಗ್ಯಕೇಂದ್ರ ಶೀಘ್ರ ಲೋಕಾರ್ಪಣೆ; ಎಂಡೊಪೀಡಿತ ಚಿಕಿತ್ಸಾಕೇಂದ್ರ ಮಂಜೂರು

ಪಾಣಾಜೆ ಸಮುದಾಯ ಆರೋಗ್ಯಕೇಂದ್ರ ಶೀಘ್ರ ಲೋಕಾರ್ಪಣೆ; ಎಂಡೊಪೀಡಿತ ಚಿಕಿತ್ಸಾಕೇಂದ್ರ ಮಂಜೂರು

oplus_262146

ಪುತ್ತೂರು: ಕೇರಳ ಕರ್ನಾಟಕ ಗಡಿಭಾಗ ಗ್ರಾಮದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ರಾಜ್ಯ ಸರ್ಕಾರ ೩೦ ಬೆಡ್‌ಗಳ ಸಮುದಾಯ ಆರೋಗ್ಯಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದ್ದು, ೧೨ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಲೋಕಾರ್ಪಣಾ ಕಾರ್ಯಕ್ರಮ ಅತೀ ಶೀಘ್ರದಲ್ಲಿ ನಡೆಯಲಿದೆ. ಪಾಣಾಜೆಯಲ್ಲಿ ಖಾಸಗಿ ಆರೋಗ್ಯ ಕ್ಲಿನಿಕ್ ಗಳು ಇಲ್ಲದಿರುವ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಸುಸಜ್ಜಿತ ಆರೋಗ್ಯಕೇಂದ್ರದ ಅಗತ್ಯತೆಯನ್ನು ಸರ್ಕಾರ ಈ ಬಾರಿ ನೀಗಿಸಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶನಿವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ನೂತನ ಸಮುದಾಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ಮಾಡಿ ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈ ಸಮುದಾಯ ಆರೋಗ್ಯ ಕೇಂದ್ರವನ್ನು ಒಂದು ವರ್ಷದ ಹಿಂದೆಯೇ ಲೋಕಾರ್ಪಣೆಯಾಗಬೇಕಿತ್ತು. ಆದರೆ ಕಾಮಗಾರಿ ಅಪೂರ್ಣವಾದ ಕಾರಣ ಮತ್ತು ಅರಣ್ಯ ಇಲಾಖೆಯಿಂದ ಎನ್‌ಒಸಿ ಸಿಗುವಲ್ಲಿ ತಡವಾಗಿದೆ. ಇನ್ನೂ ಸ್ವಲ್ಪಮಟ್ಟಿನ ಕೆಲಸಗಳು ಬಾಕಿ ಇದ್ದು, ಮುಂದಿನ ಎರಡು ತಿಂಗಳಲ್ಲಿ ಪೂರ್ಣವಾಗಲಿದೆ. ಮೇಲ್ಬಾಗದಲ್ಲಿ ಶೀಟ್ ಹಾಕುವ ಕಾಮಗಾರಿ ಬಾಕಿ ಇದ್ದು ಅದರ ಕಾಮಗಾರಿ ಶೀಘ್ರ ಪೂರ್ಣವಾಗಲಿದೆ. ಈ ಸಮುದಾಯ ಕೇಂದ್ರದಲ್ಲಿ ೭ ಮಂದಿ ಡಿಗ್ರೂಫ್, ೭ ಮಂದಿ ದಾದಿಯರು ಹಾಗೂ ೭ ಮಂದಿ ಸಿಬಂದಿಗಳು ಹಾಗೂ ಪ್ರಸೂತಿ ತಜ್ಞರು, ಅನಸ್ತೇಶಿಯಾ ಸೇರಿದಂತೆ ೫ ಮಂದಿ ವೈದ್ಯರ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ. ೨೪ಗಂಟೆಯೂ ಆರೋಗ್ಯಸೇವೆ ಇಲ್ಲಿ ದೊರೆಯಲಿದೆ. ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಿಫ್ಟ್ ವ್ಯವಸ್ಥೆಗೆ ಅನುದಾನ ಮೀಸಲಿಡಲಾಗಿದೆ. ವೈದ್ಯಕೀಯ ಪರಿಕರಗಳನ್ನು ಖರೀದಿಗೆ ೮೨ ಲಕ್ಷ ಅನುದಾನದ ಬೇಡಿಕೆ ಈಡೇರಿಕೆಗೆ ಕ್ರಮಕೈಗೊಳ್ಳಲಾಗುವುದು. ಸಿಬಂದಿಗಳಿಗೆ ವಸತಿಗೃಹದ ನಿರ್ಮಾಣಕ್ಕೆ ವರದಿ ಸಿದ್ಧಪಡಿಸುವಂತೆ ಶಾಸಕರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪಾಣಾಜೆಗೆ ಎಂಡೋ ಪೀಡಿತರ ಚಿಕಿತ್ಸಾ ಕೇಂದ್ರ
ಪಾಣಾಜೆ ಗ್ರಾಮದಲ್ಲಿ ೧೮೦ ಎಂಡೋ ಪೀಡಿತರಿದ್ದಾರೆ. ಇದರಲ್ಲಿ ೯ ಮಂದಿ ಚಲನಾರಹಿತ ಸ್ಥಿತಿಯಲ್ಲಿದ್ದಾರೆ. ಇವರಿಗೆ ಅನುಕೂಲವಾಗುವಂತೆ ಪಾಣಾಜೆಗೆ ಎಂಡೋ ಪೀಡಿತರ ಚಿಕಿತ್ಸಾಲಯವನ್ನು ಸರ್ಕಾರ ಮಂಜೂರು ಮಾಡಿದೆ. ಎಂಡೋಪೀಡಿತರ ಫಿಸಿಯೊಥೆರಪಿ ಚಿಕಿತ್ಸೆಯೂ ಸಮುದಾಯ ಆರೋಗ್ಯಕೇಂದ್ರದಲ್ಲಿ ಪ್ರಾರಂಭವಾಗಲಿದೆ. ಎಂಡೋಪೀಡಿತ ಚಿಕಿತ್ಸಾಕೇಂದ್ರಕ್ಕೆ ಸರ್ಕಾರ ತಿಂಗಳಿಗೆ ಸುಮಾರು ೫ ಲಕ್ಷ ಆರ್ಥಿಕ ನೆರವು ನೀಡುತ್ತದೆ. ಈಗಾಗಲೇ ಅವಿಭಜಿತ ಪುತ್ತೂರಿನ ಕೊಯಿಲದಲ್ಲಿ ಎಂಡೋ ಪೀಡಿತರ ಚಿಕಿತ್ಸಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಮ್ಮಯ್ಯ, ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ, ಡಾ. ವೇದಾವತಿ, ಡಾ. ಸುಧಾಕರ್ , ಸಮಿತಿ ಸದಸ್ಯರಾದ ವಿಶ್ವನಾಥ ರೈ, ಸದಾನಂದ ನಾಯ್ಕ ಭರಣ್ಯ, ವಿಮಲಾ , ಅಬೂಬಕ್ಕರ್ ಆರ್ಲಪದವು, ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.