
ನವದೆಹಲಿ, ಆ. 11- ದೆಹಲಿ-ಎನ್ಸಿಆರ್ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಮುಂಗಾರು ಮಾರುತಗಳು ಉತ್ತರ ಭಾರತದಲ್ಲಿ ಅತ್ಯಂತ ಸಕ್ರಿಯಗೊಂಡಿರುವ ಕಾರಣ ನಿರಂತರ ಮಳೆ ಮುಂದುವರಿದಿದೆ. ಇಂದು ಭಾರತೀಯ ಹವಾಮಾನ ಇಲಾಖೆಯು ದೇಶದ ಒಟ್ಟು 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಉತ್ತರ ಭಾರತದ ಪ್ರಮುಖ ಭಾಗಗಳಾದ ದೆಹಲಿ-ಎನ್ಸಿಆರ್, ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ವ್ಯಾಪಕ ಮಳೆಯಾಗುವ ಮುನ್ಸೂಚನೆ ಲಭ್ಯವಾಗಿದೆ.
ಹವಾಮಾನ ಇಲಾಖೆ ನೀಡಿರುವ ವಿವರವಾದ ಮಾಹಿತಿ ಪ್ರಕಾರ, ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಛತ್ತೀಸ್ಗಢ, ಬಿಹಾರ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಉತ್ತರಾಖಂಡ, ಹಿಮಾಚಲ ಪ್ರದೇಶ, ಕೇರಳ, ಲಕ್ಷದ್ವೀಪ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಅತ್ಯಂತ ಭಾರಿ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮಾನ್ಸೂನ್ ಸಕ್ರಿಯವಾಗಿರುವುದರಿಂದ ಅದರ ಪೂರ್ವ ಮತ್ತು ಪಶ್ಚಿಮ ಭಾಗದ ಹಲವಾರು ಜಿಲ್ಲೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಇಂದೂ ಸಹ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಎನ್ಸಿಆರ್ ಪ್ರದೇಶಗಳಲ್ಲಿ ಈಗಾಗಲೇ ನಿರಂತರವಾಗಿ ಮಳೆಯಾಗುತ್ತಿದ್ದು, ಕಳೆದ ಶುಕ್ರವಾರ ಸುರಿದ ಮಳೆಯು ಬರೋಬ್ಬರಿ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ವಾರಾಂತ್ಯದಲ್ಲೂ ಸಹ ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ ಸುರಿದಿದ್ದು, ಇಂದಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹವಾಮಾನ ಇಲಾಖೆಯು ಹಳದಿ ಎಚ್ಚರಿಕೆಯನ್ನು ನೀಡಿದೆ. ಮುಂಬರುವ ದಿನಗಳಲ್ಲಿ ಅಂದರೆ ಆಗಸ್ಟ್ 12 ರಿಂದ 15 ರವರೆಗೆ ದೆಹಲಿಯ ಆಕಾಶವು ಮೋಡಕವಿದ ವಾತಾವರಣದಿಂದ ಕೂಡಿದ್ದು, ಸಾಧಾರಣದಿಂದ ಹಗುರವಾದ ಮಳೆಯಾಗುವ ನಿರೀಕ್ಷೆಯಿದೆ.
ಮಧ್ಯಪ್ರದೇಶದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ರಾಜ್ಯದ ಪ್ರಮುಖ ನಗರಗಳು ಹಾಗೂ ಜಿಲ್ಲೆಗಳಾದ ಭೋಪಾಲ್, ದೇವಾಸ್, ಅಗರ್-ಮಾಲ್ವಾ, ಇಂದೋರ್, ರೈಸೇನ್, ಮಂಡ್ಸೌರ್, ರತ್ಲಂ, ರಾಜ್ಗಢ, ಸೆಹೋರ್, ಶಾಜಾಪುರ ಮತ್ತು ಉಜ್ಜಯಿನಿ ಪ್ರದೇಶಗಳಲ್ಲಿ ಇಂದು ಸಿಡಿಲು ಮತ್ತು ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ. ಇತ್ತ ಬಿಹಾರ ರಾಜ್ಯದಲ್ಲೂ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆಯನ್ನು ನೀಡಿದ್ದು, ಇಂದು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಆಗಸ್ಟ್ 13 ರಿಂದ 15 ರ ಅವಧಿಯಲ್ಲಿ ಬಿಹಾರದಲ್ಲಿ ಮುಂಗಾರು ಮತ್ತಷ್ಟು ಬಲಗೊಳ್ಳಲಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.




























