
ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.20-ದೇಶದ ಅಭಿವೃದ್ದಿಗೆ ಸಾಕ್ಷರತೆ ಹೆಚ್ಚಳ ಹಾಗೂ ಬಡತನ ನಿರ್ಮೂಲನೆಯಿಂದ ಸಾಧ್ಯ ಎಂಬ ಪರಿಕಲ್ಪನೆಯಿಂದ ಕಾರ್ಯಕ್ರಮ ರೂಪಿಸಿದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಉಕ್ಕಿನ ಮಹಿಳೆ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 99ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶವು ಬಹಳ ಸಂಕಷ್ಟದಲ್ಲಿದ್ದಾಗ ಅಧಿಕಾರ ವಹಿಸಿಕೊಂಡ ಇಂದಿರಾಗಾಂಧಿ ಅವರು ಶೇ. 10 ರಷ್ಟು ಇದ್ದ ಸಾಕ್ಷರತೆಯ ಪ್ರಮಾಣವನ್ನು ಶೇ. 70ಕ್ಕೆ ಏರಿಕೆ ಮಾಡುವ ಮೂಲಕ ಅಭಿವೃದ್ದಿಗೆ ನಾಂಧಿ ಹಾಡಿದರು. ಅವರು ತೆಗೆದುಕೊಂಡ ದಿಟ್ಟ ನಿಲುವುಗಳು ದೇಶದ ಅಭಿವೃದ್ದಿಗೆ ಭದ್ರ ಬುನಾದಿ ಹಾಕಿಕೊಟ್ಟವು. ಶತ್ರು ರಾಷ್ಟ್ರಗಳೊಂದಿಗೆ ಯುದ್ದ ಮಾಡುವ ಜೊತೆಗೆ ಭಾರತ ಭದ್ರತೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾಗದರೆ ಸುಮ್ಮನೆ ಕೂರುವುದಿಲ್ಲ ಎಂಬ ಸಂದೇಶವನ್ನು ನೀಡಿದರು. ಅಂಥ ದಿಟ್ಟ ಮಹಿಳೆ ನಮ್ಮ ಇಂದಿರಾಗಾಂಧಿ. ಹೀಗಾಗಿ ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯಲಾಗುತ್ತದೆ. ದೇಶದÀ ಅಭಿವೃದ್ದಿಯಲ್ಲಿ ಅವರು ನೀಡಿದ ಕೊಡುಗೆ ಹೆಚ್ಚಿನದ್ದಾಗಿದೆ.
ಯುವ ರಾಜಕಾರಣಿಗಳು ಅವರ ತತ್ವ ಅದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಅವರ ಕೊಡುಗೆಯನ್ನು ಸ್ಮರಿಸುವ ಜೊತೆಗೆ ದೇಶದಲ್ಲಿ ಮತ್ತೇ ಕಾಂಗ್ರೆಸ್ ಆಡಳಿತ ಬರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿದೆ. ಕಾಂಗ್ರೆಸ್ ಪಕ್ಷ ದೇಶದ ಸಮಸ್ತ ಜನರ ಅಭಿವೃದ್ದಿಗಾಗಿ ಸಮಾನತೆ ಮತ್ತು ಭ್ರಾತೃತ್ವಕ್ಕೆ ಶ್ರಮಿಸುತ್ತದೆ. ಇಂದಿರಾಗಾಂಧಿ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರು ಸಾಗೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯ ಕರಿನಂಜನಪುರ ಸ್ವಾಮಿ, ಪ್ರಚಾರ ಸಮಿತಿಯ ಬ್ಲಾಕ್ ಅಧ್ಯಕ್ಷ ಅಪ್ಸರ್ ಅಹಮದ್, ಗ್ಯಾರಂಟಿ ಸಮಿತಿಯ ಸದಸ್ಯ ಮರಿಯಾಲದಹುಂಡಿ ಕುಮಾರ್, ನಾಗರಾಜು, ನಂಜಶೆಟ್ಟಿ ಇತರರು ಇದ್ದರು.





















