
ಲಕ್ನೋ,ಸೆ.2:- ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಯು ಪ್ರಕೃತಿಯ ಸವಾಲುಗಳ ನಡುವೆಯೂ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಕಠಿಣ ಹವಾಮಾನ ಹಾಗೂ ಸುರಿಯುತ್ತಿರುವ ಮಳೆಯ ನಡುವೆಯೂ ಆಗಸ್ಟ್ ಒಂದೇ ತಿಂಗಳಿನಲ್ಲಿ 2.31 ಲಕ್ಷಕ್ಕೂ ಅಧಿಕ ಯಾತ್ರಿಕರು ನಾಲ್ಕು ಧಾಮಗಳ ದರ್ಶನ ಪಡೆದು ಕಳೆದ ನಾಲ್ಕು ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ಈ ಪೈಕಿ ಪ್ರಸಿದ್ಧ ಬದರಿನಾಥ ಧಾಮ ಒಂದರಲ್ಲೇ 1.25 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆ ಸಲ್ಲಿಸಿರುವುದು ವಿಶೇಷ.
ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮಂದಗತಿಯಲ್ಲಿದ್ದ ಯಾತ್ರೆಯು ಆಗಸ್ಟ್ನಲ್ಲಿ ಗಣನೀಯ ಚೇತರಿಕೆ ಕಂಡಿದ್ದು, ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ಬಾರಿ 93,000ಕ್ಕೂ ಹೆಚ್ಚು ಭಕ್ತರು ಹೆಚ್ಚುವರಿಯಾಗಿ ಭೇಟಿ ನೀಡಿದ್ದಾರೆ.
ಇದರೊಂದಿಗೆ ಸಿಖ್ಖರ ಪವಿತ್ರ ಕ್ಷೇತ್ರ ಹೇಮಕುಂಡ್ ಸಾಹಿಬ್ನಲ್ಲೂ ಭಕ್ತರ ಹರಿವು ಹೆಚ್ಚಾಗಿದ್ದು, ಆಗಸ್ಟ್ನಲ್ಲಿ ಸುಮಾರು 67,000ಕ್ಕೂ ಹೆಚ್ಚು ಯಾತ್ರಿಕರು ದರ್ಶನ ಪಡೆದಿದ್ದಾರೆ. ಪ್ರವಾಸಿಗರ ಭದ್ರತೆ ಹಾಗೂ ಸುಗಮ ಸಂಚಾರಕ್ಕಾಗಿ ರಾಜ್ಯ ಸರ್ಕಾರವು ಭೂಸಸಿತ ಪೀಡಿತ ಪ್ರದೇಶಗಳಲ್ಲಿ ವಿಶೇಷ ರಕ್ಷಣಾ ಪಡೆಗಳನ್ನು ನಿಯೋಜಿಸಿದ್ದು, ಪರಿಸ್ಥಿತಿಯನ್ನು ಸತತವಾಗಿ ಮೇಲ್ವಿಚಾರಣೆ ಮಾಡುತ್ತಿದೆ.ಉತ್ತರಾಖಂಡದಲ್ಲಿ ಚಾರ್ಧಾಮ್ ಯಾತ್ರೆಗಾಗಿ ಎರಡನೇ ಹಂತದ ಹೆಲಿಕಾಪ್ಟರ್ ಸೇವೆಗಳು ಸೆಪ್ಟೆಂಬರ್ 15 ರಂದು ಪ್ರಾರಂಭವಾಗಲಿವೆ. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಮಾನ್ಸೂನ್ ಕಡಿಮೆಯಾದ ನಂತರ ಹವಾಮಾನವು ಹೆಲಿಕಾಪ್ಟರ್ ಹಾರಾಟಕ್ಕೆ ಸುರಕ್ಷಿತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸೂಚನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹೆಲಿಕಾಪ್ಟರ್ ಸೇವೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ, ಎಎಐ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯನೊಂದಿಗೆ ಸಮನ್ವಯ ಕಾರ್ಯ ನಡೆಯುತ್ತಿದೆ. ಸಹಸ್ರಧಾರ ಹೆಲಿಪೆÇೀರ್ಟ್ ಮತ್ತು ಸೀತಾಪುರದಲ್ಲಿ ಎಟಿಸಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಬದರಿನಾಥಕ್ಕೆ ಶೀಘ್ರದಲ್ಲೇ ಎಟಿಸಿ ಸೌಲಭ್ಯವನ್ನು ಯೋಜಿಸಲಾಗಿದ್ದು, 2027 ರ ತೀರ್ಥಯಾತ್ರೆಗೆ ಮೊದಲು ಕೇದಾರನಾಥದಲ್ಲಿ ಒಂದನ್ನು ಸ್ಥಾಪಿಸಲಾಗುವುದು.






























