
ಸಂಜೆವಾಣಿ ವಾರ್ತ
ಬಳ್ಳಾರಿ, ಆ.06: ನಗರದ ಜಿಲ್ಲಾಧಿಕಾರಿ ಕಛೇರಿ ಹತ್ತಿರ ಕೆ.ಪಿ.ಎಸ್.ಸಿ ಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹಾಗೂ ಅರ್ಹರಿಗೆ ನ್ಯಾಯ ಒದಗಿಸಿ ಎಂದು ಯುವಜನ ಸಂಘಟನೆ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಅಧ್ಯಕ್ಷರಾದ ಎ.ಪಂಪಾಪತಿ ಕೋಳೂರು ಮಾತನಾಡುತ್ತಾ – ‘ಕೆಪಿಎಸ್ಸಿಯಲ್ಲಿ ಪದೇ ಪದೇ ಬೆಳಕಿಗೆ ಬರುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅವ್ಯವಹಾರಗಳು ಹಾಗೂ ವಿಳಂಬಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಸಂಕಷ್ಟಕ್ಕೀಡಾಗಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿ ವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ’ ಎಂದರು.
ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ – ‘ಲಕ್ಷಾಂತರ ಯುವಜನರ ಕನಸುಗಳಿಗೆ ಬೆಳಕಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ) ಇಂದು ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಅಕ್ರಮಗಳಿಂದ ಪ್ರಶ್ನಾರ್ಹವಾಗಿದೆ. 1998-99ರ ನೇಮಕಾತಿ ವಿವಾದಗಳಿಂದ ಆರಂಭವಾಗಿ, 2011ರ ಪರೀಕ್ಷಾ ಅಕ್ರಮಗಳು, 2014ರ ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ, 2019ರ ಅಂಕಗಳ ತಿರುಚುವಿಕೆಯ ಆರೋಪಗಳು, ಇತ್ತೀಚಿನ ವರ್ಷಗಳಲ್ಲಿ ಪಿಡಿಓ ನೇಮಕಾತಿಯಲ್ಲಿನ ಅಕ್ರಮಗಳು, ಕೆಎಎಸ್ ಪರೀಕ್ಷೆಯಲ್ಲಿ ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳು, ಕೆಪಿಎಸ್ಸಿ ಅಧ್ಯಕ್ಷರ ಸ್ವಜನ ಪಕ್ಷಪಾತ, ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿ ಅವ್ಯವಹಾರ ಸೇರಿದಂತೆ ಪ್ರತಿಯೊಂದು ಪರೀಕ್ಷೆಗಳಲ್ಲಿ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳು-ಇವೆಲ್ಲವೂ ಉದ್ಯೋಗಾಕಾಂಕ್ಷಿಗಳ ನಂಬಿಕೆಯನ್ನು ಅಲುಗಾಡಿಸಿವೆ. ಪ್ರತಿ ಹಗರಣವು ಸಾವಿರಾರು ಯುವಜನರ ಶ್ರಮ, ಸಮಯ ಮತ್ತು ಭವಿಷ್ಯದ ಮೇಲೆ ಹೊಡೆತ ನೀಡಿದೆ. ಅರ್ಹತೆಗಿಂತ ಹಣ, ಪ್ರಭಾವ ಮತ್ತು ಲಂಚ ನೀಡಿದವರಿಗೆ ಉದ್ಯೋಗಾವಕಾಶ ಸಿಗುತ್ತಿದೆ ಎಂಬ ಭಾವನೆ ಸಮಾಜದಲ್ಲಿ ಬೇರೂರಿದೆ. ಕೆ.ಪಿ.ಎಸ್.ಸಿ ಯಲ್ಲಿನ ಭ್ರಷ್ಟಾಚಾರ ಮತ್ತು ಆಕ್ರಮಗಳು ಕೇವಲ ಕೆಲವೇ ಅಭ್ಯರ್ಥಿಗಳ ಸಮಸ್ಯೆಯಲ್ಲ; ಅದು ರಾಜ್ಯದ ಲಕ್ಷಾಂತರ ಯುವಜನರ ಭವಿಷ್ಯದ ಪ್ರಶ್ನೆಯಾಗಿದೆ.
ಈ ಪರಿಸ್ಥಿತಿಗೆ ತೆರೆ ಬೀಳಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದು, ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಜನರ ವಿಶ್ವಾಸ ಗಳಿಸುವ ರೀತಿಯಲ್ಲಿ ರೂಪಿಸಬೇಕು. ಆದ್ದರಿಂದ ಕೆಪಿಎಸ್ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹಾಗೂ ಅರ್ಹರಿಗೆ ನ್ಯಾಯ ಒದಗಿಸಲು ತಾವು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನೆಯ ಸದಸ್ಯರಾದ ಇ.ಊ.ಪ್ರಮೋದ್, ಶಿವಶಂಕರ್,ಮುನೀರ್ ಭೀಮ, ಗಾದಿಲಿಂಗ ಇನ್ನಿತರ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
































